ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ನಾಯಕ ಕೆ.ಎಲ್. ರಾಹುಲ್(103*) ಸಿಡಿಲಬ್ಬರದ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 199 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ 20 ಓವರ್ ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ 4 ವಿಕೆಟ್ ನಷ್ಟಕ್ಕೆ 199 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಲಕ್ನೋ ಪರ ರಾಹುಲ್(103), ಮನೀಷ್ ಪಾಂಡೆ(38), ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು.
*ರಾಹುಲ್ ಶತಕದ ಅಬ್ಬರ*
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಾಬಲ್ಯ ಹೊಂದಿರುವ ಕೆ.ಎಲ್.ರಾಹುಲ್, ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮುಂಬೈ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ರಾಹುಲ್ 103 ರನ್(60 ಬಾಲ್, 9 ಬೌಂಡರಿ, 5 ಸಿಕ್ಸ್) ಮೂಲಕ ತಂಡಕ್ಕೆ ನೆರವಾದರು. ಇನ್ನಿಂಗ್ಸ್ ಅಂತ್ಯದವರೆಗೂ ಜವಾಬ್ದಾರಿಯ ಆಟವಾಡಿದ ನಾಯಕ ರಾಹುಲ್, ಐಪಿಎಲ್ನ ಮೂರನೇ, ಮುಂಬೈ ವಿರುದ್ಧ 2ನೇ ಹಾಗೂ 2022ರ ಐಪಿಎಲ್ ಆವೃತ್ತಿಯಲ್ಲಿ ತಮ್ಮ ಮೊದಲ ಶತಕಗಳಿಸಿ ಮಿಂಚಿದರು. ಅಲ್ಲದೇ 100ನೇ ಐಪಿಎಲ್ ಪಂದ್ಯದಲ್ಲಿ ಅಮೋಘ ಶತಕಗಳಿಸಿದ ರಾಹುಲ್, ಈ ಪಂದ್ಯವನ್ನ ಅವಿಸ್ಮರಣೀಯಗೊಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್(24), ಮನೀಷ್ ಪಾಂಡೆ(38), ಮಾರ್ಕಸ್ ಸ್ಟಾಯ್ನಿಸ್(10) ಹಾಗೂ ದೀಪಕ್ ಹೂಡ(15) ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಮುಂಬೈ ಪರ ಜಯದೇವ್ ಉನಾದ್ಕಟ್ 2, ಮುರುಗನ್ ಅಶ್ವಿನ್, ಫ್ಯಾಬಿಯನ್ ಅಲೆನ್ ತಲಾ 1 ವಿಕೆಟ್ ಪಡೆದರು.