15ನೇ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್, ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. 2022ರ ಐಪಿಎಲ್‌ನ ಕೊನೆ ಹಂತದಲ್ಲಿರುವ ಐದು ಬಾರಿಯ ಚಾಂಪಿಯನ್ಸ್, ಭವಿಷ್ಯದ ದೃಷ್ಟಿಯಿಂದ ತಮ್ಮ ತಂಡದ ಬೆಂಚ್ ಸ್ಟ್ರೆಂಥ್‌ನ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.
ಪ್ರಸಕ್ತ ಐಪಿಎಲ್‌ನಲ್ಲಿ ಈಗಾಗಲೇ ತಂಡದಲ್ಲಿ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿದಿರುವ ಮುಂಬೈ, ಹಲವು ಯುವ ಆಟಗಾರರನ್ನ ಕಣಕ್ಕಿಳಿಸಿದೆ. ಸೌತ್ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಸೇರಿದಂತೆ ಭಾರತದ ಯುವ ಆಟಗಾರರಾದ ತಿಲಕ್ ವರ್ಮ, ಹೃತಿಕ್ ಶೋಕೆನ್ ಹಾಗೂ ಕುಮಾರ್ ಕಾರ್ತಿಕೇಯ ಅವರುಗಳು ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಲ್ಲದೇ ಈ ಎಲ್ಲಾ ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ತಮ್ಮದೇ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮುಂಬೈ ತಂಡದ ಮುಂದಿನ ಪಂದ್ಯಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕಣಕ್ಕಿಳಿಯುವ ಬಗ್ಗೆ ಭಾರೀ ನಿರೀಕ್ಷೆ ಎದುರಾಗಿದೆ. ಮುಂಬೈ ಇಂಡಿಯನ್ಸ್ ಮೇ 6ರಂದು ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಹಣಾಹಣಿ ನಡೆಸಲಿದೆ. ಈ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಅವರಿಗೆ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೆಚ್ಚಾಗಿದೆ.

ಜಯವರ್ಧನೆ ಏನಂದ್ರು?
ಅರ್ಜುನ್ ತೆಂಡುಲ್ಕರ್‌ಗೆ ತಂಡದಲ್ಲಿ ಸ್ಥಾನ ನೀಡುವ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ, 2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನ 30 ಲಕ್ಷಕ್ಕೆ ಮುಂಬೈ ತಂಡಕ್ಕೆ ಪಡೆಯಲಾಗಿದೆ. ಅಲ್ಲದೇ ಯುವ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡುಲ್ಕರ್ ಅವರನ್ನ ಪಡೆಯಲು ಗುಜರಾಜ್ ಟೈಟನ್ಸ್ ಸಹ 25 ಲಕ್ಷ ಬಿಡ್ ಮಾಡಿತ್ತು. ಅರ್ಜುನ್ ತೆಂಡುಲ್ಕರ್ ಅವರನ್ನ ಆಡಿಸುವ ವಿಚಾರದಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನ ನೋಡಬೇಕಾಗುತ್ತದೆ. ಪ್ರತಿ ಪಂದ್ಯದಲ್ಲಿ ಗೆಲ್ಲಬೇಕೆಂಬ ನಿರೀಕ್ಷೆಯೊಂದಿಗೆ ಆಡಲಿದ್ದು, ಸಮರ್ಥ ಆಟಗಾರರನ್ನು ಕಣಕ್ಕಿಳಿಸಬೇಕಿದೆ. ಈ ಆಟಗಾರರ ಸಾಲಿನಲ್ಲಿ ಅರ್ಜುನ್ ತೆಂಡುಲ್ಕರ್ ಕೂಡ ಒಬ್ಬರಾಗಿದ್ದರೆ, ಖಂಡಿತ ಅವರನ್ನ ಕಣಕ್ಕಿಳಿಸಲಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2021ರಲ್ಲಿ ಗಾಯದ ಸಮಸ್ಯೆ:
ಯುಎಇಯಲ್ಲಿ ನಡೆದ 2021ರ ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡುಲ್ಕರ್, ಟೂರ್ನಿಯ ದ್ವಿತೀಯಾರ್ಧದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಹೀಗಾಗಿ 2021ರ ಸೀಸನ್‌ನಲ್ಲೂ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮತ್ತೆ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅರ್ಜುನ್ ತೆಂಡುಲ್ಕರ್, 2021ರ ಜನವರಿ ತಿಂಗಳಿನಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.