Rafael Nadal – ಸ್ಪೇನ್ ಗೂಳಿಗೆ ಒಲಿದ ಮೆಕ್ಸಿಕನ್ ಓಪನ್ ಪ್ರಶಸ್ತಿಯ ಗರಿ
ಸ್ಪೇನ್ ನ ಗೂಳಿ ರಫೆಲ್ ನಡಾಲ್ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿಕೊಂಡಿದೆ. 35ರ ಹರೆಯದ ರಫೆಲ್ ನಡಾಲ್ ಅವರು 2022ರ ಮೆಕ್ಸಿಕನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು 6-4, 6-4ರಿಂದ ಕೆಮರೂನ್ ನೊರಿಸ್ ಅವರನ್ನು ಪರಾಭವಗೊಳಿಸಿದ್ರು. Mexican Open: Rafael Nadal beats Norrie
ಈ ಮೂಲಕ ರಫೆಲ್ ನಡಾಲ್ ಅವರು ಎಟಿಪಿ ಪ್ರಶಸ್ತಿಗಳ ಸಂಖ್ಯೆಯನ್ನು 91ಕ್ಕೇರಿಸಿಕೊಂಡಿದ್ದಾರೆ. ಕಳೆದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲ್ಯಾಮ್ ಇತಿಹಾಸದಲ್ಲೇ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದರು.ರಫೆಲ್ ನಡಾಲ್ ಅವರು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡ್ರೆ, ಸ್ವೀಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅಂದ ಹಾಗೇ ರಫೆಲ್ ನಡಾಲ್ ಅವರು ಮೆಕ್ಸಕನ್ ಓಪನ್ ಪ್ರಶಸ್ತಿ ಗೆಲ್ಲುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 2005, 2013 ಮತ್ತು 2020ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಅಲ್ಲದೆ 2022ರಲ್ಲಿ ನಡಾಲ್ ಗೆದ್ದಿರುವ ಮೂರನೇ ಪ್ರಶಸ್ತಿಯಾಗಿದೆ.
91 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್ ಅವರು ಇವಾನ್ ಲೆಂಡ್ಲೆ ಅವರ ದಾಖಲೆಯನ್ನು ಅಳಿಸಿ ಹಾಕಲು ಇನ್ನೂ ಮೂರು ಪ್ರಶಸ್ತಿಗಳನ್ನು ಗೆಲ್ಲಬೇಕಾಗಿದೆ. ಇವಾನ್ ಲೆಂಡ್ಲೆ ಅವರು 94 ಎಟಿಪಿ ಪ್ರಶಸ್ತಿ ಗೆದ್ದಿದ್ರೆ, ರೋಜರ್ ಫೆಡರರ್ ಅವರು 103 ಎಟಿಪಿ ಪ್ರಶಸ್ತಿಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ. ಜಿಮ್ ಕಾನಾರ್ಸ್ ಅವರು 109 ಎಟಿಪಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.