ಆರಂಭಿಕರಾದ ರಾಬಿನ್ ಉತ್ತಪ್ಪ(88*) ಹಾಗೂ ಗೌತಮ್ ಗಂಭೀರ್(61*) ಬೊಂಬಾಟ್ ಬ್ಯಾಟಿಂಗ್‌ನಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಇಂಡಿಯಾ ಮಹಾರಾಜಾಸ್ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಕತಾರ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದ ಇಂಡಿಯಾ ಮಹಾರಾಜಾಸ್ ತನ್ನ 3ನೇ ಪಂದ್ಯದಲ್ಲಿ ಉತ್ತಮ ಕಮ್‌ಬ್ಯಾಕ್ ಮಾಡಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಮಹಾರಾಜಾಸ್ ಎದುರಾಳಿ ತಂಡವನ್ನ 20 ಓವರ್‌ಗಳಲ್ಲಿ 157/5 ರನ್‌ಗಳಿಗೆ ಕಟ್ಟಿಹಾಕಿತು. ಈ ಸವಾಲು ಚೇಸ್ ಮಾಡಿದ ಇಂಡಿಯಾ ಮಹಾರಾಜಾಸ್ ಕೇವಲ 12.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 159 ರನ್‌ಗಳಿಸುವ ಮೂಲಕ ಗೆಲುವಿನ ನಗೆಬೀರಿತು.
ಇಂಡಿಯಾ ಮಹಾರಾಜಾಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(88* ರನ್, 39 ಬಾಲ್, 11 ಬೌಂಡರಿ, 5 ಸಿಕ್ಸ್) ಹಾಗೂ ಗೌತಮ್ ಗಂಭೀರ್(61* ರನ್, 36 ಬಾಲ್, 12 ಬೌಂಡರಿ) ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಏಷ್ಯಾ ಲಯನ್ಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಏಷ್ಯಾ ಲಯನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾಗಿ ಕಣಕ್ಕಿಳಿದ ಉಪುಲ್ ತರಂಗ(69) ಹಾಗೂ ತಿಲಕರತ್ನೆ ದಿಲ್ಶಾನ್(32) ಮೊದಲ ಟಿಕೆಟ್‌ಗೆ 73 ರನ್‌ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಮ ಆಟವಾಡಿದ ತರಂಗ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ನಂತರ ಬಂದ ಹಫೀಜ಼್(2) ಹಾಗೂ ಮಿಸ್ಬಾ-ಉಲ್-ಹಕ್(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಅಸ್ಗರ್ ಅಫ್ಘಾನ್(15), ಅಬ್ದುಲ್ ರಜಾ಼ಕ್(27*) ತಂಡಕ್ಕೆ ಆಸರೆಯಾದರು. ಇದರ ಪರಿಣಾಮ ಏಷ್ಯಾ ಲಯನ್ಸ್ 20 ಓವರ್‌ಗಳಲ್ಲಿ 157/5 ರನ್‌ಗಳಿಸಿತು. ಇಂಡಿಯಾ ಮಹಾರಾಜಾಸ್ ಪರ ರೈನಾ 2, ಬಿನ್ನಿ, ಹರ್ಭಜನ್ ಹಾಗೂ ತಾಂಬೆ ತಲಾ 1 ವಿಕೆಟ್ ಪಡೆದರು.
LLC 2023, India Maharajas, Asia Lions, Robin Uthappa, Legends League Cricket