ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಫೈನಲ್ ಗೆ ಪ್ರವೇಶಿಸಿದ್ದ ಭಾರತದ ಲಕ್ಷ್ಯ ಸೇನ್ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸೋಲು ಕಂಡಿದ್ದಾರೆ.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಲಕ್ಷ್ಯ ಸೇನ್ ಎರಡು ನೇರ ಗೇಮ್ ಗಳಲ್ಲಿ ಎದುರಾಳಿ ತಂಡದ ಆಟಗಾರನ ವಿರುದ್ಧ ನಿರಾಸೆ ಅನುಭವಿಸಿದರು. ಇವರು 18-21, 15-21ರಿಂದ ಥಾಯ್ಲೆಂಡ್ ನ ಕುನ್ಲವುಟ್ ವಿಟಿಡ್ಸಾರ್ನ್ ವಿರುದ್ಧ 57 ನಿಮಿಷಗಳ ಹೋರಾಟದಲ್ಲಿ ನಿರಾಸೆ ಅನುಭವಿಸಿದರು.
ಮೊದಲ ಗೇಮ್ ನಲ್ಲಿ ಲಕ್ಷ್ಯ ಸೇನ್ ಜಿದ್ದಾಜಿದ್ದಿನ ಕಾದಾಟ ನೀಡಿದರು. ಅಲ್ಲದೆ ಆರಂಭದಲ್ಲಿ ಸಮಬಲದಲ್ಲಿ ಸಾಗಿದ್ದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು. ಅಲ್ಲದೆ ಎದುರಾಳಿ ಆಟಗಾರನ ತಂತ್ರವನ್ನು ಅರಿಯುವಲ್ಲಿ ವಿಫಲರಾದರು. ಪರಿಣಾಮ ಮೊದಲ ಗೇಮ್ ನಲ್ಲಿ ಆಘಾತ ಅನುಭವಿಸಿದರು.
ಎರಡನೇ ಗೇಮ್ ನಲ್ಲಿ ಲಕ್ಷ್ಯ ಪುಟಿದೇಳುವ ಸೂಚನೆ ನೀಡಿದರು. ಆದರೆ ಫಲ ನೀಡಲಿಲ್ಲ. ಸ್ಥಿರ ಆಟದ ಪ್ರದರ್ಶನ ನೀಡಿದ ಥಾಯ್ಲೆಂಡ್ ಆಟಗಾರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.
ಶನಿವಾರ ನಡೆದ ಸೆಮೀಸ್ ಕಾದಾಟದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ಅಬ್ಬರಿಸಿದರು. ಲಕ್ಷ್ಯ 21-13, 12-21, 22-20 ರಿಂದ ವಿಶ್ವದ ನಂಬರ್ 1 ಆಟಗಾರ ವಿಕ್ಟರ್ ಆಕ್ಸೆಲ್ಸೆನ್ ಅವರನ್ನು ಉಪಾಂತ್ಯ ಪಂದ್ಯದಲ್ಲಿ ಸೋಲಿಸಿ ಜಿದ್ದು ಗೆದ್ದಿದ್ದರು.