ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಮಹತ್ವದ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟರ್ಗಳಾದ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಮುಖಾಮುಖಿ ಆಗುತ್ತಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಕೌತಕ ಒಂದೆಡೆಯಾದರೆ ಈ ಇಬ್ಬರು ಸ್ಟಾರ್ ಆಟಗಾರರ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಇಬ್ಬರು ಮಾಜಿ ಕ್ಯಾಪ್ಟನ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ಪರಸ್ಪರ ಅತ್ಯುತ್ತಮ ದಾಖಲೆ ಹೊಂದಿದ್ದು, ಮಹತ್ವದ ಫೈನಲ್ ಪಂದ್ಯದಲ್ಲೂ ತಮ್ಮ ತಂಡಕ್ಕಾಗಿ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಪ್ರಾಬಲ್ಯ ಮೂಡಿಸಿರುವ ಕಿಂಗ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್ಗಳಲ್ಲಿ 1979 ರನ್ಗಳಿಸಿದ್ದರೆ. ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್, ಟೀಂ ಇಂಡಿಯಾ ವಿರುದ್ಧ 18 ಟೆಸ್ಟ್ ಪಂದ್ಯಗಳಲ್ಲಿ 1887 ರನ್ಗಳಿಸಿದ್ದಾರೆ. ಇನ್ನೂ ರನ್ ಮಷಿನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ಅಂಗಳದಲ್ಲಿ ಉತ್ತಮ ದಾಖಲೆ ಹೊಂದಿದ್ದು, 16 ಪಂದ್ಯಗಳಲ್ಲಿ 33.22ರ ಸರಾಸರಿಯಲ್ಲಿ 1033 ರನ್ಗಳಿಸಿದ್ದಾರೆ. ಕೊಹ್ಲಿ ಅವರಿಗೆ ಹೋಲಿಸಿದರೆ ಇಂಗ್ಲೆಂಡ್ ನೆಲದಲ್ಲಿ ಸ್ಟೀವ್ ಸ್ಮಿತ್ ಬ್ಯಾಟಿಂಗ್ ದಾಖಲೆ ಉತ್ತಮವಾಗಿದ್ದು, 16 ಪಂದ್ಯಗಳಲ್ಲಿ 59.55ರ ಸರಾಸರಿಯಲ್ಲಿ 1727 ರನ್ಗಳಿಸಿದ್ದಾರೆ.
ಐಸಿಸಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಎರಡು ತಂಡಗಳಿಗೆ ಈ ಇಬ್ಬರ ಪ್ರದರ್ಶನ ದೊಡ್ಡಮಟ್ಟದ ಆಸರೆಯಾಗಲಿದ್ದು, ಆಂಗ್ಲರ ನಾಡಿದ ಹೈವೋಲ್ಟೇಜ್ ಫೈಟ್ನಲ್ಲಿ ಇಬ್ಬರಲ್ಲಿ ಯಾರು ದೊಡ್ಡ ಯಶಸ್ಸು ಸಾಧಿಸುತ್ತಾರೆ ಎಂಬ ಕುತೂಹಲಕ್ಕೆ ಜೂ.7ರಿಂದ ಆರಂಭವಾಗುವ ಫೈನಲ್ ಪಂದ್ಯದಲ್ಲಿ ಉತ್ತರ ಸಿಗಲಿದೆ.
Kohli v Smith, Virat Kohli, Team India, Steve Smith, Australia, WTC Final, Sports Karnataka