KL Rahul | ಟೀಂ ಇಂಡಿಯಾಗೆ ಕೆ.ಎಲ್.ರಾಹುಲ್ ಬೇಕಾ ?
ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಫಿಟ್ ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಇರುವುದು ಗೊತ್ತಿರುವ ವಿಚಾರವೇ.
ಸ್ವದೇಶದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ 20 ಸರಣಿಗೆ ಕ್ಯಾಪ್ಟನ್ ಆಗಿದ್ದ ಕೆ.ಎಲ್.ರಾಹುಲ್, ಗಾಯದ ಕಾರಣದಿಂದಾಗಿ ತಂಡದಿಂದ ದೂರ ನಡೆದರು.
ಇದಾದ ನಂತರ ಸರ್ಜರಿಗೆ ಒಳಗಾಗಿದ್ದ ರಾಹುಲ್, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಆಗಿದ್ದರು. ಆದ್ರೆ ಕೊರೊನಾ ಸೋಂಕು ಶನಿಯಂತೆ ವಕ್ಕರಿಸಿತ್ತು.
ಸದ್ಯ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಕೆ.ಎಲ್, ಏಷ್ಯಾ ಕಪ್ ಗಾಗಿ ಟೀಂ ಇಂಡಿಯಾ ಸೇರಿಕೊಳ್ಳುವ ಸಾಧ್ಯತೆಗಳಿವೆ.
ಇದು ಹೀಗಿದ್ದರೇ ಕೆ.ಎಲ್.ರಾಹುಲ್ ಗೈರಿನಲ್ಲಿ ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುತ್ತಿದ್ದಾರೆ.
ಸಾಧಾರಣವಾಗಿ ನಾಲ್ಕನೇ ಆಡುವ ಸೂರ್ಯ ಕುಮಾರ್ ಯಾದವ್, ವಿಂಡೀಸ್ ಪ್ರವಾಸದ ಟಿ 20 ಸರಣಿಯಲ್ಲಿ ಓಪನರ್ ಆಗಿ ಯಶಸ್ಸು ಗಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್, ಟೀಂ ಇಂಡಿಯಾದಲ್ಲಿ ಕೆ.ಎಲ್.ರಾಹುಲ್ ಸ್ಥಾನದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ರಾಹುಲ್ ಗಾಯದ ಕಾರಣದಿಂದಾಗಿ ಟೀಂ ಇಂಡಿಯಾದಿಂದ ದೂರ ಇದ್ದಾರೆ. ಈ ಸಮಯದಲ್ಲಿ ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅದರಲ್ಲೂ ಸೂರ್ಯ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ.
ಇವರು ತಮ್ಮ ಪ್ರದರ್ಶನದಿಂದ ಸೆಲೆಕ್ಟರ್ ಗಳಿಗೆ ಸವಾಲು ಹಾಕುತ್ತಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್ ತಂಡಕ್ಕೆ ಬೇಕಾ..?
ಒಂದು ವೇಳೆ ರಾಹುಲ್ ತಂಡಕ್ಕೆ ವಾಪಸ್ ಆದ್ರೆ ಮೊದಲಿನ ಫಾರ್ಮ್ ನಲ್ಲಿಯೇ ಮಿಂಚುತ್ತಾರಾ..? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.
ಆಟಗಾರರು ಸಾಮಾನ್ಯವಾಗಿ ತಮ್ಮ ಸ್ಥಾನವನ್ನ ಮತ್ತೊಬ್ಬರಿಗೆ ಬಿಟ್ಟುಕೊಡುವುದಕ್ಕೆ ಇಷ್ಟಪಡುವುದಿಲ್ಲ. ಆದ್ರೆ ಇಲ್ಲಿ ರಾಹುಲ್ ಪದೇ ಪದೇ ತಮ್ಮ ಸ್ಥಾನವನ್ನು ಮತ್ತೊಬ್ಬರಿಗೆ ಕೊಡುತ್ತಲೇ ಇದ್ದಾರೆ.
ಯುವ ಆಟಗಾರರಿಂದ ಅವರು ಭಾರಿ ಪೈಪೋಟಿ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಟಿ 20 ವಿಶ್ವಕಪ್ 2022 ಟೂರ್ನಿ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಏಷ್ಯಾಕಪ್ 2022 ಭಾರತೀಯ ಆಟಗಾರರಿಗೆ ಮತ್ತಷ್ಟು ಮಹತ್ವದ್ದಾಗಿದೆ.
ಇಂಗ್ಲೆಂಡ್, ವೆಸ್ಟ್ ಇಂಡೀಸ್ ಟಿ 20 ಸರಣಿಯಲ್ಲಿ ಮಿಂಚಿದ ಆಟಗಾರರೇ ಏಷ್ಯಾಕಪ್ ಗೆ ಆಯ್ಕೆ ಆಗುವ ಸಾಧ್ಯತೆಗಳಿವೆ. ಆಗಸ್ಟ್ 27 ರಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಿಯಲ್ಲಿ ಯುವ ಆಟಗಾರರು ತನ್ನ ಪ್ರತಿಭೆಯನ್ನು ಸಾಭಿತು ಪಡಿಸಲಿದ್ದಾರೆ.
ಆ ಮೂಲಕ ವಿಶ್ವಕಪ್ ನಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಏಷ್ಯಾ ಕಪ್ ಬಳಿಕ ಸೆಪ್ಟಂಬರ್ ನಲ್ಲಿ ಟೀ ಇಂಡಿಯಾ ಸ್ವದೇಶದಲ್ಲಿ ಆಸ್ಟ್ರೇಲಿಯಾ, ದಕ್ಷಿಣಾ ಆಫ್ರಿಕಾ ಜೊತೆ ಟಿ 20 ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಾ ವೇದಿಕೆಯಾಗಿ ಅಕ್ಟೋಬರ್ 16 ರಿಂದ ಟಿ 20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.