ಪ್ರಸಕ್ತ ಸಾಲಿನ ಐಪಿಎಲ್ ಅರ್ಧ ಹಾದಿಯನ್ನು ಕ್ರಮಿಸಿದೆ. ಈಗ ಎಲ್ಲ ತಂಡಗಳು ಪ್ಲೇ ಆಫ್ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತಿವೆ. ಈ ದೃಟ್ಟಿಯಿಂದ ಗುರುವಾರ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಕಾದಾಟ ರೋಚಕತೆ ಹೆಚ್ಚಿಸಿದೆ.
ಎರಡೂ ತಂಡಗಳು ಉತ್ತಮ ಆರಂಭವನ್ನು ಮಾಡಿದರೂ, ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿವೆ. ಡೆಲ್ಲಿ ಆಡಿರುವ 7 ಪಂದ್ಯಗಳಲ್ಲಿ 3 ಜಯ, 4 ಸೋಲು ಕಂಡಿದ್ದು 6 ಅಂಕ ಕಲೆ ಹಾಕಿದೆ. ಕೆಕೆಆರ್ 8 ಪಂದ್ಯಗಳಲ್ಲಿ 3 ಜಯ, 5 ಸೋಲು ಕಂಡಿದ್ದು ಆರು ಅಂಕ ಸೇರಿಸಿದೆ. ಐಪಿಎಲ್ ನ 41ನೇ ಪಂದ್ಯದಲ್ಲಿ ಜಯ ದಾಖಲಿಸಿ ಪ್ಲೇ ಆಫ್ ಕನಸಿಗೆ ಪುಷ್ಠಿ ನೀಡುವ ಕನಸಿನಲ್ಲಿ ಉಭಯ ತಂಡಗಳಿವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಕೆಕೆಆರ್ ಬಲಾಢ್ಯವಾಗಿದೆ. ಒಟ್ಟಾರೆ ಐಪಿಎಲ್ ನಲ್ಲಿ ಉಭಯ ತಂಡಗಳು 30 ಬಾರಿ ಎದುರಾಗಿದ್ದು, 16ರಲ್ಲಿ ಕೆಕೆಆರ್, 13ರಲ್ಲಿ ಡೆಲ್ಲಿ ಜಯ ಸಾಧಿಸಿದೆ.
ಕೋಲ್ಕತ್ತಾ ತಂಡಕ್ಕೆ ಬ್ಯಾಟಿಂಗ್ ವಿಭಾಗ ತಲೆ ನೋವಾಗಿದೆ. ಪ್ರಸಕ್ತ ಐಪಿಎಲ್ ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಆಂಡ್ರಿ ರಸೆಲ್ ರನ್ ಕಲೆ ಹಾಕುತ್ತಿರುವುದನ್ನು ಬಿಟ್ಟರೆ ಉಳಿದ ಆಟಗಾರರು ನಿರಾಸೆ ಅನುಭವಿಸುತ್ತಿದ್ದಾರೆ.ಏರಾನ್ ಫಿಂಚ್, ಸ್ಯಾಮ್ ಬಿಲ್ಲಿಂಗ್ಸ್, ಕಳೆದ ಐಪಿಎಲ್ ನ ಹೀರೋ ವೆಂಕಟೇಶ್ ಅಯ್ಯರ್ ರನ್ ಸೇರಿಸುವಲ್ಲಿ ಹಿಂದೆ ಬಿದ್ದಿರುವುದು ತಂಡಕ್ಕೆ ತಲೆ ನೋವಾಗಿದೆ. ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಸುನಿಲ್ ನರೈನ್ ಮಿಂಚುತ್ತಿಲ್ಲ.
ಬೌಲಿಂಗ್ ವಿಭಾಗದಲ್ಲಿ ಹೊಸ ಚೆಂಡನ್ನು ಉಮೇಶ್ ಯಾದವ್ ಹಾಗೂ ಟೀಮ್ ಸೌಥಿ ಹಂಚಿಕೊಂಡು ಬಿಗುವಿನ ದಾಳಿ ನಡೆಸಬೇಕಿದೆ. ಉಳಿದ ಬೌಲರ್ ಗಳು ಶಿಸ್ತು ಬದ್ಧ ದಾಳಿ ಸಂಘಟಿಸಿ ಎದುರಾಳಿಗೆ ಕಾಡಿದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಪವರ್ ಫುಲ್ ಆರಂಭ ನೀಡಬೇಕಿದೆ. ಸರ್ಫರಾಜ್ ಖಾನ್, ರಿಷಭ್ ಪಂತ್, ಲಲಿತ್ ಯಾದವ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿ, ಕೊನೆಯ ಓವರ್ ಗಳಲ್ಲಿ ರನ್ ಗುಡ್ಡೆ ಹಾಕಬೇಕಿದೆ.
ಡೆಲ್ಲಿ ತಂಡದ ಪರ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಇವರು ಈ ಋತುವಿನಲ್ಲಿ 13 ವಿಕೆಟ್ ಕಬಳಿಸಿದ್ದು, ಪರ್ಪಲ್ ಕ್ಯಾಪ್ ರೇಸ್ ನಲ್ಲಿದ್ದಾರೆ. ವೇಗದ ಬೌಲರ್ ಖಲೀಲ್ ಅಹ್ಮದ್ ಸಹ ತಮ್ಮ ಜವಾಬ್ದಾರಿಯನ್ನು ತಿಳಿದು ಬೌಲ್ ಮಾಡುತ್ತಿದ್ದಾರೆ. ಮುಷ್ತಾಫಿಜುರ್ ರಹಮಾನ್, ಶಾರ್ದೂಲ್ ಠಾಕುರ್ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದು ಎದುರಾಳಿಗೆ ಕಾಟ ನೀಡಬೇಕಿದೆ. ಅಂದಾಗ ಮಾತ್ರ ಪೂರ್ಣ ಅಂಕದ ಕನಸು ನನಸಾಗುತ್ತದೆ.