ಆರಂಭಿಕ ಆಟಗಾರರಾದ ಉಸ್ಮಾನ್ ಖವಾಜ(97) ಹಾಗೂ ಡೇವಿಡ್ ವಾರ್ನರ್(68) ಅವರ ಆರಂಭಿಕ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ದಿಟ್ಟ ಪ್ರತ್ಯುತ್ತರ ನೀಡಿದೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆಸೀಸ್ ಬ್ಯಾಟ್ಸಮನ್ಗಳು ಅದ್ಭುತ ಪ್ರದರ್ಶನ ನೀಡಿದರು. ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಮೊತ್ತ 4 ವಿಕೆಟ್ಗೆ 476 ರನ್ಗಳಿಗೆ ಪ್ರತಿಯಾಗಿ ತನ್ನ ಮೊದಲ ಆರಂಭಿಸಿರುವ ಆಸ್ಟ್ರೇಲಿಯಾ, 3ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 271 ರನ್ಗಳಿಸಿದ್ದು, 205 ರನ್ಗಳ ಹಿನ್ನಡೆ ಹೊಂದಿದೆ. ಆಸ್ಟ್ರೇಲಿಯಾ ಪರ ಮಾರ್ನಸ್ ಲಬುಚಾಗ್ನೆ(69*) ಹಾಗೂ ಸ್ಟೀವ್ ಸ್ಮಿತ್ 24*) ಕಣದಲ್ಲಿದ್ದಾರೆ.
ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 5 ರನ್ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಉಸ್ಮಾನ್ ಖವಾಜ(97) ಹಾಗೂ ಡೇವಿಡ್ ವಾರ್ನರ್(68) ಉತ್ತಮ ಆರಂಭ ನೀಡಿದರು. ಆದರೆ ಮೊದಲ ವಿಕೆಟ್ಗೆ 156 ರನ್ ಕಲೆಹಾಕಿದ್ದ ಈ ಜೋಡಿಯನ್ನ ಸಜಿದ್ ಖಾನ್ ಬೇರ್ಪಡಿಸಿದರು. ಪರಿಣಾಮ ಡೇವಿಡ್ ವಾರ್ನರ್ 68 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಪಾಕಿಸ್ತಾನ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ್ದ ಉಸ್ಮಾನ್ ಖವಾಜ 97 ರನ್ಗಳಿಸಿ ಶತಕದತ್ತ ಸಾಗುತ್ತಿದ್ದರು. ಆದರೆ ಎಡಗೈ ಸ್ಪಿನ್ನರ್ ನ್ಯುಮನ್ ಅಲಿ ಬೌಲಿಂಗ್ನಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.
ನಂತರ ಜೊತೆಯಾದ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸಮನ್ ಮಾರ್ನಸ್ ಲಬುಚಾಗ್ನೆ(69*) ಹಾಗೂ ಸ್ಟೀವ್ ಸ್ಮಿತ್(24*) ಜವಾಬ್ದಾರಿಯ ಆಟವಾಡಿದರು. ಈ ಜೋಡಿ 3ನೇ ವಿಕೆಟ್ಗೆ ಅಜೇಯ 68 ರನ್ ಕಲೆಹಾಕಿದ್ದ ಆಡುತ್ತಿದ್ದ ವೇಳೆ ಉಂಟಾದ ಮಂದ ಬೆಳಕಿನ ಕಾರಣಕ್ಕೆ ದಿನದಾಟವನ್ನು ಒಂದು ಗಂಟೆ ಮುಂಚಿತನಾಗಿ ಅಂತ್ಯಗೊಳಿಸಲಾಯಿತು. ಪಾಕಿಸ್ತಾನದ ಪರ ಸಜಿದ್ ಖಾನ್ ಹಾಗೂ ನ್ಯುಮನ್ ಅಲಿ ತಲಾ 1 ವಿಕೆಟ್ ಪಡೆದರು. ಪಂದ್ಯದಲ್ಲಿ ಇನ್ನು ಎರಡು ದಿನದಾಟ ಬಾಕಿಯಿದ್ದು, ಮಾ.7ರಂದು ನಡೆಯುವ ನಾಲ್ಕನೇ ದಿನದಾಟ ಪಂದ್ಯದ ಫಲಿತಾಂಶವನ್ನ ನಿರ್ಧರಿಸಲಿದೆ.