ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಶಿಲ್ಲಾಂಗ್ ಮೈದಾನದಲ್ಲಿ ನಡೆದ ಎಲೈಟ್ ಗ್ರೂಪ್ ಬಿಯ ಮೇಘಾಲಯ ವಿರುದ್ಧದ ಪಂದ್ಯದಲ್ಲಿ 115 ರನ್‌ಗಳ ಭರ್ಜರಿ ಜಯ ಸಾಧಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ರಾಜ್ಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಮಯಾಂಕ್ ಅಗರ್‌ವಾಲ್ 15 ರನ್ ಬಾರಿಸಿ ಚೆಂಗಮ್ ಸಂಗ್ಮಾಗೆ ವಿಕೆಟ್ ಒಪ್ಪಿಸಿದರು. ಪಾದಾರ್ಪಣೆ ಪಂದ್ಯವನ್ನಾಡಿದ ನಿಕಿನ್ ಜೋಶ್ 13 ರನ್ ಬಾರಿಸಿ ರಾಜೇಶ್ ಬಿಷ್ಣೋಯ್ ಜೂನಿಯರ್ ಎಸೆತದಲ್ಲಿ ಪೆವಿಲಿಯನ್ ಸೇರಿದರು. ಇನ್ನು ಮೂರನೇ ಬ್ಯಾಟಿಂಗ್ ಮಾಡಿದ ರವಿಕುಮಾರ್ ಸಮರ್ಥ್ ಹಾಗೂ ಮಾಜಿ ನಾಯಕ ಮನೀಶ್ ಪಾಂಡೆ ಜೋಡಿ 58 ರನ್‌ಗಳ ಜತೆಯಾಟವಾಡಿ, ತಂಡದ ಸ್ಕೋರ್ ಹೆಚ್ಚಿಸಿತು. ಸಮರ್ಥ್ 46 ರನ್ ಹಾಗೂ ಪಾಂಡೆ 36 ರನ್ ಬಾರಿಸಿ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.
ಕರ್ನಾಟಕ ಕೇವಲ 120 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ನೆರವಾಗಿದ್ದೇ ಯುವ ಆಲ್ರೌಂಡರ್ ಶ್ರೇಯಸ್ ಗೋಪಾಲ್. ತಾಳ್ಮೆಯ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. 76 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 64 ರನ್ ಬಾರಿಸಿದರು. ಶರತ್ ಬಿ. ಆರ್ 32 ಹಾಗೂ ಕೃಷ್ಣಪ್ಪ ಗೌತಮ್ 20 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಕರ್ನಾಟಕ 50 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು.
ಸವಾಲಿನ ಮೊತ್ತ ಬೆನ್ನತ್ತಿದ ಆತಿಥೇಯ ಮೇಘಾಲಯ, ಮೊದಲ ವಿಕೆಟ್‌ಗೆ 58 ರನ್‌ಗಳ ಜತೆಯಾಟವಾಡಿ ಮೂಲಕ ಉತ್ತಮ ಆರಂಭ ಪಡೆಯಿತು. 19ನೇ ಓವರ್‌ನಲ್ಲಿ ರೋನಿತ್ ಮೋರೆ ಅವರು ವಾನ್ಲಾಂಬೊಕ್ ನಾಂಗ್ಖ್ಲಾವ್ ವಿಕೆಟ್ ಪಡೆಯುವ ಮೂಲಕ ರಾಜ್ಯ ತಂಡಕ್ಕೆ ಯಶಸ್ಸು ತಂದುಕೊಟ್ಟರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಗೋಪಾಲ್ ಸ್ಪಿನ್ ಮೋಡಿ ಮಾಡಿದರು. 21 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಮೇಘಾಲಯ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದರು. 46 ಓವರ್‌ಗಳಲ್ಲಿ ಕೇವಲ 144 ರನ್ ಬಾರಿಸಿ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು.
ಶ್ರೇಯಸ್ ಗೋಪಾಲ್ 3 ವಿಕೆಟ್, ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಉರುಳಿಸಿದರು. ವಿದ್ವತ್ ಕಾವೇರಪ್ಪ ಹಾಗೂ ವಿ ಕೌಶಿಕ್ ತಲಾ ಒಂದು ವಿಕೆಟ್ ಕಬಳಿಸಿದರು.