ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಟೆಸ್ಟ್ ತಂಡದ ನಾಯಕನಾಗಿದ್ದ ಜೋ ರೂಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ರೂಟ್, ವೈಯುಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರೂ ಇಂಗ್ಲೆಂಡ್ ತಂಡವು ಸಾಲು ಸಾಲು ಸೋಲು ಕಂಡಿದೆ. ಹೀಗಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವಕ್ಕೆ ಜೋ ರೂಟ್ ರಾಜೀನಾಮೆ ನೀಡಿದ್ದಾರೆ.
ಕಳೆದ 17 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಗೆದ್ದಿದೆ. ಆಸ್ಟ್ರೇಲಿಯಾ ಎದುರಿನ ಆಷಸ್ ಟೆಸ್ಟ್ ಸರಣಿ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಸೋಲು ಕಂಡಿತ್ತು. ಸತತ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಮೇಲೆ ಟೀಕಾಪ್ರಹಾರವೇ ಹರಿದು ಬಂದಿತ್ತು. ಹಲವು ಸಹವರ್ತಿಗಳ ಜತೆ ಚರ್ಚಿಸಿಯೇ ತಾವು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಜೋ ರೂಟ್ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಮುಗಿಸಿದ ನಾನು ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದೆ. ಇದು ಒಂದು ರೀತಿ ನನ್ನ ಪಾಲಿಗೆ ಸವಾಲಿನ ತೀರ್ಮಾನವಾಗಿತ್ತು. ನಾನು ನನ್ನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹಪಾಠಿಗಳ ಬಳಿ ಚರ್ಚಿಸಿ ಇದೇ ಸರಿಯಾದ ತೀರ್ಮಾನವೆಂದು ಭಾವಿಸಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದೆ ಎಂದು ಜೋ ರೂಟ್ ಹೇಳಿದ್ದಾರೆ.