Pro Kabaddi: ಜೈಪುರ್ ಗೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ
ಅರ್ಜುನ್ ದೇಶ್ವಾಲ್ (10) ಅವರ ಸೂಪರ್ ಟೆನ್ ಸಾಧನೆ ಹಾಗೂ ಸರ್ವಾಂಗೀಣ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ 39-24 ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು.
ಇದುವರೆಗೂ ನಡೆದ ಪಂದ್ಯಗಳಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ವಿ.ಅಜಿತ್ ರೈಡಿಂಗ್ನಲ್ಲಿ ಮತ್ತು ಅಂಕುಶ್ ಟ್ಯಾಕಲ್ನಲ್ಲಿ ತಲಾ 5 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಬೆಂಗಾಲ್ ವಾರಿಯರ್ಸ್ ಪರ ರೈಡಿಂಗ್ನಲ್ಲಿ ಶ್ರೀಕಾಂತ್ ಜಾದವ್ (6) ಹಾಗೂ ಗಿರೀಶ್ ಮಾರುತಿ(3) ಟ್ಯಾಕಲ್ನಲ್ಲಿ ಮಿಂಚಿದರೂ ಜಯದ ದಡ ತಲುಪಿಸುವಲ್ಲಿ ವಿಫಲರಾದರು.
ಪ್ರಥಮಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 20-12 ಅಂತರದಲ್ಲಿ ಬೆಂಗಾಲ್ ವ್ಯಾರಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿತ್ತು. ರೈಡಿಂಗ್ನಲ್ಲಿ 11, ಟ್ಯಾಕಲ್ನಲ್ಲಿ 6 ಮತ್ತು ಆಲೌಟ್ ಮೂಲಕ 2 ಅಂಕ ಗಳಿಸಿದ ಪೈಪುರ ಪಂದ್ಯ ಗೆಲ್ಲಲು ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತ್ತು. ಬಲಿಷ್ಠ ಬೆಂಗಾಲ್ ವಾರಿಯರ್ಸ್ ಮೂರು ಪಂದ್ಯಗಳಲ್ಲಿ ನಿರಂತರ ಜಯ ಗಳಿಸಿದ ನಂತರ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ತನ್ನ ನೈಜ ಸಾಂರ್ಥ್ಯವನ್ನು ತೋರಿಸುವಲ್ಲಿ ವಿಫಲವಾಯಿತು.
ಜೈಪುರ ಪಿಂಕ್ ಪ್ಯಾಂಥರ್ಸ್ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿದಿತ್ತು. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ ರೈಡಿಂಗ್ನಲ್ಲಿ ವೈಫಲ್ಯ ಕಂಡಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.
Jaipur Pink Panthers, Bengal Warriors, Pro Kabaddi