ಅತಿಥೇಯ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಚೊಚ್ಚಲ ಶತಕ ಸಿಡಿಸಿ ಮಿಂಚಿದ ದೀಪಕ್ ಹೂಡ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಡುಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡ, ಐರ್ಲೆಂಡ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. ಇನ್ನಿಂಗ್ಸ್ ಆರಂಭದಿಂದಲೇ ಅಬ್ಬರಿಸಿದ ಹೂಡ, ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಐರ್ಲೆಂಡ್‌ನ ದುರ್ಬಲ ಬೌಲಿಂಗ್ ದಾಳಿಯ ಸಂಪೂರ್ಣ ಲಾಭ ಪಡೆದ ದೀಪಕ್ ಹೂಡ, 27 ಬಾಲ್‌ಗಳಲ್ಲಿ ಅರ್ಧಶತಕ ಸಿಡಿಸಿದ್ದ ಹೂಡ, ನಂತರದಲ್ಲೂ ಬ್ಯಾಟಿಂಗ್ ಆರ್ಭಟ ಮುಂದುವರಿಸುವ ಮೂಲಕ T20Iನಲ್ಲಿ ಚೊಚ್ಚಲ ಶತಕ ಸಿಡಿಸಿದರು.
ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದ ದೀಪಕ್ ಹೂಡ ಅಂತಿಮವಾಗಿ 57 ಬಾಲ್‌ಗಳಲ್ಲಿ 104 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ದೀಪಕ್ ಹೂಡ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 6 ಸಿಕ್ಸ್ ಒಳಗೊಂಡಿತು. ಅಲ್ಲದೇ ಸಂಜೂ ಸ್ಯಾಮ್ಸನ್ ಜೊತೆಗೂಡಿ ದೀಪಕ್ ಹೂಡ 2ನೇ ವಿಕೆಟ್‌ಗೆ ದಾಖಲೆಯ176 ರನ್ ಜೊತೆಯಾಟವಾಡಿದರು. ಹೂಡ ಅವರ ಈ ಸ್ಪೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 225 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಶತಕ ಸಿಡಿಸಿದ 4ನೇ ಆಟಗಾರ:
ಐರ್ಲೆಂಡ್ ವಿರುದ್ಧ ಚೊಚ್ಚಲ T20I ಶತಕ ಸಿಡಿಸಿದ ದೀಪಕ್ ಹೂಡ, ಆ ಮೂಲಕ ಶತಕ ಸಿಡಿಸಿದ 4ನೇ ಭಾರತೀಯ ಆಟಗಾರ ಎನಿಸಿದರು. ಈ ಮೊದಲು ಸುರೇಶ್ ರೈನಾ, ರೋಹಿತ್ ಶರ್ಮ ಹಾಗೂ ಕೆ.ಎಲ್.ರಾಹುಲ್ T20Iನಲ್ಲಿ ಶತಕ ಸಿಡಿಸಿದ್ದಾರೆ. ಇವರಲ್ಲಿ ಸುರೇಶ್ ರೈನಾ T20Iನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿದ್ದರೆ. ನಂತರದಲ್ಲಿ ರೋಹಿತ್ ಶರ್ಮ ಹಾಗೂ ಕೆ.ಎಲ್. ರಾಹುಲ್ T20Iನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಇದೀಗ ಇವರ ಸಾಲಿಗೆ ದೀಪಕ್ ಹೂಡ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ್ದ ಹೂಡ:
ದೀಪಕ್ ಹೂಡ 2022ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಆಲ್ರೌಂಡರ್, ಸ್ಪೋಟಕ ಬ್ಯಾಟಿಂಗ್‌ನಿಂದ ಮಿಂಚಿದ್ದರು. ತಮ್ಮ ಈ ಪ್ರದರ್ಶನದಿಂದಾಗಿ ದೀಪಕ್ ಹೂಡ ಅವರಿಗೆ ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕಾರಣವಾಯಿತು.
T20Iನಲ್ಲಿ ಭಾರತದ ಪರ ಶತಕ ಸಿಡಿಸಿದವರು
ರೋಹಿತ್ ಶರ್ಮ – 4
ಕೆ.ಎಲ್.ರಾಹುಲ್ – 2
ಸುರೇಶ್ ರೈನಾ – 1
ದೀಪಕ್ ಹೂಡ – 1