ಭಾನುವಾರದ ಡಬಲ್ ಧಮಾಕಾದ ಬಳಿಕ ವಾರದ ಮೊದಲ ಸ್ವಲ್ಪ ಕೂಲ್ ಆಗಿ ಕಾಣುತ್ತಿದೆ ಅಂತ ಹೇಳುವ ಹಾಗಿಲ್ಲ. ಯಾಕಂದರೆ ಐಪಿಎಲ್ನಲ್ಲಿ ಎರಡು ಹೊಸ ತಂಡಗಳು ಕಣಕ್ಕಿಳಿಯುತ್ತಿವೆ. ತಂಡದಲ್ಲಿರುವ ಆಟಗಾರರು ಪರಿಚಿತರೇ ಆಗಿದ್ದರೂ ಹೊಸ ತಂಡ ಸೇರಿಕೊಂಡ ಉತ್ಸಾಹ ಆಟಗಾರರಲ್ಲಿ ಕಾಣುತ್ತಿದೆ. ವಾಂಖೆಡೆಯಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಸೂಪರ್ ಜೈಂಟ್ಸ್ಗಳು ಅಖಾಡಕ್ಕೆ ಇಳಿಯಲಿವೆ.
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನು ಕೆ.ಎಲ್.ರಾಹುಲ್ ವಹಿಸಿಕೊಂಡಿದ್ದಾರೆ. ವಿದೇಶಿ ಆಟಗಾರರ ಅಲಭ್ಯತೆ ಮೊದಲ ಪಂದ್ಯಕ್ಕೆ ಹೊಡೆತ ನೀಡಿದೆ. ರಾಹುಲ್ ಜೊತೆಗೆ ಎವಿನ್ ಲೆವಿಸ್ ಆಟ ಆರಂಭಿಸಲಿದ್ದಾರೆ. ಮನೀಶ್ ಪಾಂಡೆ ಟಾಪ್ ಆರ್ಡರ್ಗೆ ಸ್ಥಿರತೆ ತಂದುಕೊಡಲಿದ್ದಾರೆ. ಯುವ ಆಟಗಾರ ಆಯುಷ್ ಬಡೋನಿ ಅವಕಾಶ ಪಡೆಯಲಿದ್ದಾರೆ. ದೀಪಕ್ ಹೂಡ, ಕೃನಾಲ್ ಪಾಂಡ್ಯಾ ಮತ್ತು ಕೃಷ್ಣಪ್ಪ ಗೌತಮ್ ಆಲ್ರೌಂಡರ್ ಆಡ ಆಡಬೇಕಿದೆ. ಶ್ರೀಲಂಕಾದ ದುಷ್ಮಂತ್ ಚಾಮಿರಾ ಸೇವೆಯೂ ಸಿಗಲಿದೆ. ಆ್ಯಂಡ್ರ್ಯೂ ಟೈ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಂಡದ ಪ್ರಮುಖ ಬೌಲರ್ಗಳು.
ಆಯುಷ್ ಬಡೋನಿ ಐಪಿಎಲ್ಗೆ ಹೊಸ ಆಟಗಾರ. ಹೀಗಾಗಿ ಲಖನೌ ದೀಪಕ್ ಹೂಡ, ಕೃನಾಲ್ ಪಾಂಡ್ಯಾ ಬ್ಯಾಟಿಂಗ್ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ವೇಗದ ಬೌಲಿಂಗ್ನಲ್ಲಿ ಕೊರತೆ ಕಾಣುತ್ತಿಲ್ಲ. ಆವೇಶ್ ಖಾನ್, ಆ್ಯಂಡ್ರ್ಯೂ ಟೈ ಮತ್ತು ದುಷ್ಮಂತ್ ಚಾಮಿರಾ ವೇಗದ ಜೊತೆ ವೇರಿಯೇಷನ್ ಹೊಂದಿದ್ದಾರೆ. ರವಿ ಬಿಷ್ಣೋಯಿ ಲೆಗ್ ಸ್ಪಿನ್ನರ್. ಕೆ. ಗೌತಮ್, ಕೃನಾಲ್ ಪಾಂಡ್ಯಾ ಮತ್ತು ದೀಪಕ್ ಹೂಡ ಸೇರಿಕೊಂಡು ಬೌಲಿಂಗ್ನಲ್ಲೂ ಮೋಡಿ ಮಾಡಿದರೆ ಲಖನೌ ನಾಯಕನ ಚಿಂತೆ ದೂರವಾಗಲಿದೆ.
ಗುಜರಾತ್ ಟೈಟಾನ್ಸ್ ತಂಡದ ಬ್ಯಾಲೆನ್ಸ್ ಚೆನ್ನಾಗಿ ಕಾಣುತ್ತಿದೆ. ಶುಭ್ಮನ್ ಗಿಲ್ ಮತ್ತು ಮ್ಯಾಥ್ಯೂ ವೇಡ್ ಲೆಫ್ಟ್-ರೈಟ್ ಕಾಂಬಿನೇಷನ್ ಒದಗಿಸಿಕೊಡಲಿದೆ. ಕರ್ನಾಟಕದ ಆಲ್ರೌಂಡರ್ ಅಭಿನವ್ ಮುಕುಂದ್ ಆಟದ ಬಗ್ಗೆ ಕಣ್ಣಿದೆ. ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಆಲ್ರೌಂಡರ್ಗಳು. ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೇವಾಟಿಯಾ ಫಿನಿಷಿಂಗ್ ಟಚ್ ಕೊಡಬಲ್ಲರು. ರಶೀದ್ ಖಾನ್ ಪ್ರಮುಖ ಲೆಗ್ ಸ್ಪಿನ್ನರ್ ಆದರೆ ಜಯಂತ್ ಯಾದವ್ ಆಫ್ ಸ್ಪಿನ್ನರ್. ಮೊಹಮ್ಮದ್ ಶಮಿ ಮತ್ತು ಲೋಕಿ ಫರ್ಗ್ಯೂಸನ್ ಬೌಲಿಂಗ್ ಆರಂಭಿಸಿದರೆ, ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯಾ ಕೆಲ ಓವರುಗಳನ್ನು ಹಂಚಿಕೊಳ್ಳಬಹುದು.
ಮೇಲ್ನೋಟಕ್ಕೆ ಲಖನೌ ಕಾಂಬಿನೇಷನ್ ಮಾಡಿಕೊಳ್ಳಲು ಯೊಚನೆ ಮಾಡುವ ಹಾಗೆ ಕಾಣುತ್ತಿದೆ. ಆದರೆ ಗುಜರಾತ್ ಪಕ್ಕಾ ಆಟಗಾರರನ್ನು ಹೊಂದಿರುವ ಹಾಗೇ ಕಾಣುತ್ತಿದೆ. ಒಟ್ಟಿನಲ್ಲಿ ವಾಂಖೆಡೆಯಲ್ಲಿ ಎರಡು ಹೊಸ ತಂಡಗಳು ಕಣಕ್ಕಿಳಿಯುತ್ತಿರುವುದರಿಂದ ಸಾಕಷ್ಟು ಕುತೂಹಲವಿದೆ.