IPL -RCB – ರಾಯಲ್ ಚಾಲೆಂಜರ್ಸ್ ತಂಡದಲ್ಲಿ 10 ಮಂದಿ ಕನ್ನಡಿಗರು..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡ ಮಣ್ಣಿನ ಐಪಿಎಲ್ ಫ್ರಾಂಚೈಸಿ. ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡಗಳಲ್ಲಿ ಆರ್’ಸಿಬಿ ಕೂಡ ಒಂದು. 14 ವರ್ಷಗಳಲ್ಲಿ ಆರ್’ಸಿಬಿ ಒಮ್ಮೆಯೂ ಕಪ್ ಗೆಲ್ಲದೇ ಇದ್ರೂ, ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ.
ಆದರೆ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಮೇಲೊಂದು ಆರೋಪವಿದೆ. ಅದೇನಂದ್ರೆ ಕನ್ನಡ ಮಣ್ಣಿನ ತಂಡವಾದ್ರೂ ಕರ್ನಾಟಕದ ಆಟಗಾರರನ್ನು ಕಡೆಗಣಿಸ್ತಾರೆ ಅನ್ನೋದು. ಇದು ನಿಜ ಕೂಡ. ಈ ಬಾರಿ ಆರ್’ಸಿಬಿ ತಂಡದಲ್ಲಿರೋದು ಕೇವಲ ಇಬ್ಬರೇ ಇಬ್ಬರು ಆಟಗಾರರು. U-19 ವಿಶ್ವಕಪ್ ವಿನ್ನರ್ ಅನೀಶ್ವರ್ ಗೌತಮ್ ಮತ್ತು ವಿಕೆಟ್ ಕೀಪರ್ ಲವ್ನೀತ್ ಸಿಸೋಡಿಯಾ. ಆದ್ರೆ ಈ ಇಬ್ಬರೂ ಆಟಗಾರರು ಈ ಬಾರಿ ಪ್ಲೇಯಿಂಗ್ XIನಲ್ಲಿ ಆಡೋದು ಕಷ್ಟ. ಕರ್ನಾಟಕ ಆಟಗಾರರನ್ನು ಕಡೆಗಣಿಸ್ತಾರೆ ಅನ್ನೋ ಆರೋಪದಿಂದ ಪಾರಾಗಲಷ್ಟೇ ಇವ್ರನ್ನು ತಂಡಕ್ಕೆ ಆಯ್ಕೆ ಮಾಡಿದ ಹಾಗಿದೆ.
ಆದ್ರೆ ನಿಮ್ಗೊಂದ್ ವಿಷ್ಯ ಗೊತ್ತಾ..? ಈಗ ಕರ್ನಾಟಕದ ಆಟಗಾರರನ್ನು ಯಾವ ಆರ್’ಸಿಬಿ ಫ್ರಾಂಚೈಸಿ ಕಡೆಗಣಿಸ್ತಿದ್ಯೋ, ಅದೇ ಆರ್’ಸಿಬಿ ಒಂದು ಕಾಲದಲ್ಲಿ 10 ಮಂದಿ ಕನ್ನಡಿಗರಿಗೆ ಮಣೆ ಹಾಕಿತ್ತು. ಅದು 2008ರ ಚೊಚ್ಚಲ ಐಪಿಎಲ್ ಸೀಸನ್. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 25 ಮಂದಿ ಆಟಗಾರರ ಆರ್’ಸಿಬಿ ತಂಡ ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧವಾಗಿತ್ತು. ಆ 25 ಮಂದಿಯಲ್ಲಿ 8 ಮಂದಿ ಕನ್ನಡಿಗರಿದ್ದರು ಎಂಬುದು ವಿಶೇಷ.
ನಾಯಕ ರಾಹುಲ್ ದ್ರಾವಿಡ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ಮತ್ತೊಬ್ಬ ಸ್ಪಿನ್ ಮಾಂತ್ರಿಕ ಸುನೀಲ್ ಜೋಶಿ, ಆಲ್ರೌಂಡರ್ ಬಾಲಚಂದ್ರ ಅಖಿಲ್, ಸ್ಫೋಟಕ ದಾಂಡಿಗ ಜೆ.ಅರುಣ್ ಕುಮಾರ್, ಕರ್ನಾಟಕ ಕ್ರಿಕೆಟ್ ಕಂಡ ದಿಗ್ಗಜ ನಾಯಕ ಆರ್.ವಿನಯ್ ಕುಮಾರ್, ವೇಗದ ಬೌಲರ್ ಎನ್.ಸಿ ಅಯ್ಯಪ್ಪ, ಎಡಗೈ ಸ್ಪಿನ್ನರ್ ಕೆ.ಪಿ ಅಪ್ಪಣ್ಣ, ಓಪನರ್ ಭರತ್ ಚಿಪ್ಲಿ ಮತ್ತು ವಿಕೆಟ್ ಕೀಪರ್ ದೇವರಾಜ್ ಪಾಟೀಲ್ 2008ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದರು. IPL – Karnataka players in royal challengers bangalore 2008
2008ರಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ಅವರನ್ನು ಒಂದೇ ವರ್ಷದಲ್ಲಿ ನಾಯಕತ್ವದಿಂದ ಕೆಳಗಿಳಿಸಲಾಯ್ತು. ಬಳಿಕ ಇಂಗ್ಲೆಂಡ್”ನ ಕೆವಿನ್ ಪೀಟರ್ಸನ್ ನಾಯಕರಾದ್ರೂ, 2009ರ ಟೂರ್ನಿಯ ಮಧ್ಯದಲ್ಲೇ ಗಾಯಾಳುವಾಗಿ ಟೂರ್ನಿಯಿಂದ ಹೊರ ಬಿದ್ರು. ಆಗ ತಂಡದ ನಾಯಕತ್ವ ವಹಿಸಿಕೊಂಡ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಆ ಆವೃತ್ತಿಯಲ್ಲಿ ಆರ್’ಸಿಬಿ ತಂಡವನ್ನು ಫೈನಲ್’ವರೆಗೆ ಮುನ್ನಡೆಸಿದ್ದರು. ಫೈನಲ್’ನಲ್ಲಿ ಆರ್’ಸಿಬಿ ತಂಡ ಡೆಕ್ಕನ್ ಚಾರ್ಜರ್ಸ್ ಹೈದ್ರಾಬಾದ್ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು
ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ನಾಯಕರಾಗಿರುವವರೆಗೆ ಕರ್ನಾಟಕದ ಆಟಗಾರರಿಗೆ ಅನ್ಯಾಯವಾಗಲು ಬಿಟ್ಟಿರಲಿಲ್ಲ. ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಆರ್.ವಿನಯ್ ಕುಮಾರ್ ಅವರಂತಹ ಆಟಗಾರರು ಐಪಿಎಲ್”ನಲ್ಲಿ ಪ್ರವರ್ಧಮಾನಕ್ಕೆ ಬಂದದ್ದೇ ದ್ರಾವಿಡ್ ಮತ್ತು ಕುಂಬ್ಳೆ ನಾಯಕತ್ವದಡಿಯಲ್ಲಿ. ಆದ್ರೆ ಯಾವಾಗ ಕುಂಬ್ಳೆಯನ್ನೂ ಕೆಳಗಿಳಿಸಿ ನ್ಯೂಜಿಲೆಂಡ್”ನ ಡೇನಿಯೆಲ್ ವೆಟ್ಟೋರಿಗೆ ಆರ್’ಸಿಬಿ ನಾಯಕನ ಪಟ್ಟ ಕಟ್ಟಿತೋ, ಅಲ್ಲಿಂದ ಶುರುವಾಯ್ತು ಕನ್ನಡಿಗರ ಕಡೆಗಣನೆ. ನಂತರದ ಸತತ ಆವೃತ್ತಿಗಳಲ್ಲಿ ಕರ್ನಾಟಕದ ಆಟಗಾರರನ್ನು ಕಡೆಗಣಿಸುತ್ತಲೇ ಹೋದ ಆರ್’ಸಿಬಿ ಫ್ರಾಂಚೈಸಿ ಉತ್ತರ ಭಾರತದ ಆಟಗಾರರಿಗೆ ಮಣೆ ಹಾಕಿತು. ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಕೆ.ಗೌತಮ್, ಅಭಿಮನ್ಯು ಮಿಥುನ್…ಹೀಗೆ ಕರ್ನಾಟಕದ ಉದಯೋನ್ಮುಖ ಆಟಗಾರರನ್ನು ಆರ್”ಸಿಬಿ ಫ್ರಾಂಚೈಸಿ ಕಡೆಗಣಿಸುತ್ತಾ ಬಂತು. ಇವರಲ್ಲಿ ಕೆಲವರು ಈಗ ತಂಡಗಳನ್ನು ಸೇರಿ ದೊಡ್ಡ ಹೆಸರು ಮಾಡಿದ್ದಾರೆ. ಕನ್ನಡಿಗರನ್ನೇ ಉಳಿಸಿಕೊಂಡಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಬರ ನೀಗುತ್ತಿತ್ತೋ ಏನೋ..?