ಐಪಿಎಲ್ 16ನೇ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ದಾಖಲೆ ಬ್ರೇಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್ ಎದುರಿಸೋಕ್ಕೆ ಆರ್ಸಿಬಿ ಆಟಗಾರರು ಸಜ್ಜಾಗಿದ್ದರೆ. ಕಿಂಗ್ ಕೊಹ್ಲಿ ಸಹ ರೋಹಿತ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿರುವ ಬ್ಯಾಟರ್ಗಳ ಸಾಲಿನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮ ಅಗ್ರಸ್ಥಾನದಲ್ಲಿದ್ದು, ಡೆಲ್ಲಿ ವಿರುದ್ಧ ಆಡಿರುವ 33 ಐಪಿಎಲ್ ಪಂದ್ಯಗಳಲ್ಲಿ 977 ರನ್ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕ ಸಹ ಒಳಗೊಂಡಿದೆ.
ಇನ್ನೂ ಇವರಿಗೆ ಸಮೀಪದ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಈವರೆಗೂ ಡೆಲ್ಲಿ ವಿರುದ್ಧ ಐಪಿಎಲ್ನಲ್ಲಿ ಆಡಿರುವ 25 ಪಂದ್ಯಗಳಲ್ಲಿ 8 ಅರ್ಧಶತಕ ಬಾರಿಸಿದ್ದು, ಒಟ್ಟು 925 ರನ್ಗಳಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮ ಅವರ ಹೆಸರಿನಲ್ಲಿರುವ ಈ ದಾಖಲೆಯನ್ನ ಹಿಂದಿಕ್ಕಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯ ಕಿಂಗ್ ಕೊಹ್ಲಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲಿದೆ.
ಪ್ರಸಕ್ತ ಸೀಸನ್ನಲ್ಲಿ ಭರ್ಜರಿ ಫಾರ್ಮ್ ಕಂಡುಕೊಂಡಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಆಡಿರುವ 3 ಪಂದ್ಯಗಳಲ್ಲಿ ಬರೋಬ್ಬರಿ 150ರ ಸ್ಟ್ರೈಕ್ ರೇಟ್ನೊಂದಿಗೆ 2 ಅರ್ಧಶತಕದ ನೆರವಿನೊಂದಿಗೆ 164 ರನ್ಗಳಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಅವರ ಬ್ಯಾಟ್ನಿಂದ ಮತ್ತೊಂದು ಬೊಂಬಾಟ್ ಇನ್ನಿಂಗ್ಸ್ ಮೂಡಿಬರುವ ನಿರೀಕ್ಷೆ ಇದೆ.
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಐವರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ(791 ರನ್), ರಾಬಿನ್ ಉತ್ತಪ್ಪ(740 ರನ್) ಹಾಗೂ ಸುರೇಶ್ ರೈನಾ(661 ರನ್) ಇದ್ದಾರೆ.
IPL 2023, Virat Kohli, Rohit Sharma, RCB, DC, Sports Karnataka