ವಿಂಡೀಸ್ ದೈತ್ಯ ಕೈಲ್ ಮೈಯರ್ಸ್(73) ಸ್ಪೋಟಕ ಬ್ಯಾಟಿಂಗ್ ಹಾಗೂ ಇತರೆ ಬ್ಯಾಟ್ಸ್ಮನ್ ಸಂಘಟಿತ ಪ್ರದರ್ಶನದಿಂದ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 50 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಲಕ್ನೋದಲ್ಲಿ ನಡೆದ ಟೂರ್ನಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 193 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿಯನ್ನ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 20 ಓವರ್ಗಳಲ್ಲಿ 143/9 ರನ್ಗಳಿಸುವ ಮೂಲಕ 50 ರನ್ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಲಕ್ನೋ ಟೂರ್ನಿತಲ್ಲಿ ಶುಭಾರಂಭ ಮಾಡಿತು.
ಕೆರೆಬಿಯನ್ನರ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ವಿಂಡೀಸ್ ಬ್ಯಾಟರ್ಗಳು ಭರ್ಜರಿ ಆಟವಾಡಿದರು. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ಬ್ಯಾಟರ್ ಕೈಲ್ ಮೈಯರ್ಸ್(38 ಬಾಲ್ಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸ್ ನೆರವಿನಿಂದ 73 ರನ್ಗಳಿಸಿ ಅಬ್ಬರಿಸಿದರು. ಇವರೊಂದಿಗೆ ಇನ್ನಿಂಗ್ಸ್ ಕೊನೆಯಲ್ಲಿ ಬಂದ ನಿಕೋಲಸ್ ಪೂರನ್(36) ಉಪಯುಕ್ತ ರನ್ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ನಾಯಕ ರಾಹುಲ್(8), ಹೂಡಾ(17), ಕೃನಾಲ್ ಪಾಂಡ್ಯ(15*), ಸ್ಟಾಯ್ನಿಸ್(12) ಹಾಗೂ ಆಯುಷ್ ಬಡೊನಿ(18) ರನ್ಗಳಿಸಿದರು. ಡೆಲ್ಲಿ ಪರ ಕಲೀಲ್ ಹಾಗೂ ಸಾಕರಿಯಾ ತಲಾ 2 ವಿಕೆಟ್ ಪಡೆದರು.
ವಾರ್ನರ್ ವ್ಯರ್ಥ ಆಟ:
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 194 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಡೇವಿಡ್ ವಾರ್ನರ್(56) ಹಾಗೂ ರೈಲಿ ರೊಸೋಯ್(30) ಹೊರತಾಗಿ ಉಳಿದ ಬ್ಯಾಟರ್ಗಳು ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲವಾದರು. ಮಾರ್ಕ್ ವುಡ್(5/14) ಪರಿಣಾಮಕಾರಿ ಬೌಲಿಂಗ್ ದಾಳಿಗೆ ಡೆಲ್ಲಿ ಬ್ಯಾಟರ್ಗಳು ತತ್ತರಿಸಿದರು. ಪರಿಣಾಮ ಡೆಲ್ಲಿ ಹೋರಾಟ 143 ರನ್ಗಳಿಗೆ ಅಂತ್ಯಗೊಂಡಿತು.
ವುಡ್ ಮಿಂಚಿನ ದಾಳಿ:
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕೂಡ ಸಂಘಟಿತ ಪ್ರದರ್ಶನ ನೀಡಿತು. ವೇಗಿ ಮಾರ್ಕ್ ವುಡ್(4-0-14-5) ಉತ್ತಮ ಬೌಲಿಂಗ್ ದಾಳಿಯ ಮೂಲಕ ಡೆಲ್ಲಿ ಬ್ಯಾಟ್ಸ್ಮನ್ಗಳ ಆಟಕ್ಕೆ ಕಡಿವಾಣ ಹಾಕಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಆವೇಶ್ ಖಾನ್ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.
IPL 2023, Lucknow Super Giants, Delhi Capitals, Kyle Mayers, Mark Wood