ಚುಟುಕು ಕ್ರಿಕೆಟ್ ಸಮರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022ರ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಕಮಾಲ್ ಮಾಡೋಕ್ಕೆ ಎಲ್ಲಾ ತಂಡಗಳು ಸಕಲ ಸಿದ್ಧತೆ ಆರಂಭಿಸಿವೆ.
ಈಗಾಗಲೇ ಐಪಿಎಲ್‌ನಲ್ಲಿ ಸದ್ದು ಮಾಡಿರುವ ಎಂಟು ತಂಡಗಳ ಜೊತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ತಂಡಗಳು ಸಹ ಐಪಿಎಲ್‌ನಲ್ಲಿ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿವೆ. ಮೆಗಾ ಹರಾಜಿನ ಬಳಿಕ ಎಲ್ಲಾ ತಂಡಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಆಟಗಾರರ ಜೊತೆಗೆ ಕೆಲವು ತಂಡಗಳ ಕ್ಯಾಪ್ಟನ್ ಸಹ ಬದಲಾಗಿದ್ದಾರೆ.
ಐಪಿಎಲ್‌ನಲ್ಲಿ ದೊಡ್ಡ ಸಕ್ಸಸ್ ಕಂಡಿರುವ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹಿಂದಿನ ಆವೃತ್ತಿಯ ನಾಯಕರ ಸಾರ್ಥ್ಯದಲ್ಲೇ ಈ ಸೀಸನ್‌ನಲ್ಲೂ ಮುನ್ನಡೆಯುತ್ತಿವೆ. ಆದರೆ ನಾಯಕತ್ವದ ಜೊತೆಗೆ ಆಟಗಾರರಲ್ಲೂ ಬದಲಾವಣೆ ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಶ್ರೇಯಸ್ ಅಯ್ಯರ್ ಅವರ ಮುಂದಾಳತ್ವದಲ್ಲಿ ಹಾಗೂ ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಮುನ್ನಡೆಯಲಿವೆ.
ಇನ್ನೂ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಯಶಸ್ಸಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಗುಜರಾತ್ ಟೈಟನ್ಸ್ ಸಹ ದೊಡ್ಡ ಸಕ್ಸಸ್ ಕಾಣುವ ಲೆಕ್ಕಾಚಾರದಲ್ಲಿದೆ.
ಆರ್‌ಸಿಬಿ ಕ್ಯಾಪ್ಟನ್ ಯಾರು?
ಐಪಿಎಲ್‌ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಯಾರ ನಾಯತ್ವದಲ್ಲಿ 2022ರ ಐಪಿಎಲ್‌ನಲ್ಲಿ ಮುನ್ನಡೆಯಲಿದೆ ಎಂಬ ಕುತೂಹಲ ಆರ್‌ಸಿಬಿ ಫ್ಯಾನ್ಸ್‌ಗಳನ್ನ ಕಾಡುತ್ತಿದೆ. ಕಳೆದ ಸೀಸನ್‌ನಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ ದಿನದಿಂದಲೂ ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ತಂಡದ ನಾಯಕತ್ವ ನೀಡುವ ಕುರಿತು ಕೇಳಿ ಬಂದಿದ್ದ ಎಲ್ಲಾ ನಿರೀಕ್ಷೆಗಳು, ಐಪಿಎಲ್ ಮೆಗಾ ಹರಾಜಿನ ಬದಲಾಗಿದೆ.
ಹೀಗಾಗಿ 2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಕ್ಯಾಪ್ಟನ್ ಯಾರು? ಎಂಬುದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ನಾಯಕತ್ವ ಜವಾಬ್ದಾರಿ ನೀಡುವ ನಿರೀಕ್ಷೆ ಹೆಚ್ಚಾಗಿದ್ದು, ಹೊಸದಾಗಿ ತಂಡಕ್ಕೆ ಸೇರ್ಪಡೆಯಾಗಿರುವ ಫಾಫ್ ಡುಪ್ಲೆಸ್ಸಿ ಹಾಗೂ ಈಗಾಗಲೇ ಕೆಕೆಆರ್ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಸಹ ನಾಯಕತ್ವದ ರೇಸ್‌ನಲ್ಲಿದ್ದಾರೆ. ಆದರೆ ಅಂತಿಮವಾಗಿ ತಂಡದ ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕುತ್ತೇ? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.