ಪ್ರಸಕ್ತ ಸೀಸನ್ನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಚುಟುಕು ಕ್ರಿಕೆಟ್ ಕಾಳಗಕ್ಕೆ ದಿನಗಣನೆ ಶುರುವಾಗಿದ್ದು, ವಿಶ್ವದ ಶ್ರೀಮಂತ ಲೀಗ್ನಲ್ಲಿ ಕಮಾಲ್ ಮಾಡೋಕ್ಕೆ ಎಲ್ಲಾ ಆಟಗಾರರು ಸಜ್ಜಾಗಿದ್ದಾರೆ. ಅಂತೆಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವ ಟಿಮ್ ಡೇವಿಡ್, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ಕೆರೆಬಿಯನ್ ದೈತ್ಯ ಕೈರನ್ ಪೊಲಾರ್ಡ್ ಅವರೊಂದಿಗೆ ಆಡಲು ಉತ್ಸುಕರಾಗಿದ್ದಾರೆ.
ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಟಿಮ್ ಡೇವಿಡ್ ಇತ್ತೀಚೆಗೆ ನಡೆದ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 8.25 ಕೋಟಿ ರೂ. ಪಡೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸ್ಟಾರ್ ಆಲ್ರೌಂಡರ್ ಕೈರನ್ ಪೊಲಾರ್ಡ್ ಅವರ ಮಹಾನ್ ಅಭಿಮಾನಿಯಾಗಿರುವ ಟಿಮ್ ಡೇವಿಡ್, 15ನೇ ಆವೃತ್ತಿಯ ಐಪಿಎಲ್ನಲ್ಲಿ, ಕೈರನ್ ಪೊಲಾರ್ಡ್ ಅವರ ಪವರ್ ಗೇಮ್ ಅನ್ನು ಅನುಕರಣೆ ಮಾಡುತ್ತಾ, ಮುಂಬೈ ತಂಡಕ್ಕೆ ನೆರವಾಗುವ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಮುಂಬೈ ಇಂಡಿಯನ್ಸ್.ಕಾಮ್ ಜೊತೆಗೆ ಮಾತನಾಡಿರುವ ಟಿಮ್ ಡೇವಿಡ್, ಪೊಲಾರ್ಡ್ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ನಿಜಕ್ಕೂ ರೋಚಕ ಸಂಗತಿಯಾಗಿದ್ದು, ಅವರ ಪವರ್ ಹಿಟ್ಟಿಂಗ್ ಪ್ರದರ್ಶನವನ್ನು ನಾನು ನೋಡಿ ಆನಂದಿಸಿದ್ದೇನೆ. ಮಿಡಲ್ ಹಾಗೂ ಡೆತ್ ಓವರ್ಗಳಲ್ಲಿ ನಾವಿಬ್ಬರೂ ಒಟ್ಟಾಗಿ ಬ್ಯಾಟಿಂಗ್ ಆಡುವ ಅವಕಾಶ ಸಿಕ್ಕರೆ ಕೆಲವು ಪಂದ್ಯಗಳನ್ನು ಎದುರಾಳಿ ತಂಡದ ದೂರವಿಡಬಹುದು ಎಂದಿದ್ದಾರೆ.
ಇನ್ನೂ ಮುಂಬೈ ತಂಡದ ಕ್ಯಾಪ್ಟನ್ ಹಿಟ್ ಮ್ಯಾನ್ ರೋಹಿತ್ ಶರ್ಮ ಬಗ್ಗೆ ಮಾತನಾಡಿರುವ ಡೇವಿಡ್, ರೋಹಿತ್ ಶರ್ಮ ವರ್ಲ್ಡ್ ಕ್ಲಾಸ್ ಪ್ಲೇಯರ್ ಆಗಿದ್ದು, ಅವರು ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ಬ್ಯಾಟಿಂಗ್ ಮಾಡಲಿದ್ದಾರೆ. ಅವರ ಈ ಸಾಮರ್ಥ್ಯ ನಿಜಕ್ಕೂ ಪ್ರಶಂಸನೀಯವಾಗಿದ್ದು, ಇಂತಹ ಕ್ಲಾಸ್ ಆಟಗಾರರೊಂದಿಗೆ ಕಾಲ ಕಳೆಯಲು ಮತ್ತು ಅವರಿಂದ ಕೆಲವು ವಿಚಾರಗಳನ್ನು ಕಲಿಯಲು ನನಗೆ ಸಿಕ್ಕಿರುವ ದೊಡ್ಡ ಬೋನಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮುಂಬೈ ಬೌಲಿಂಗ್ ಅಸ್ತ್ರವಾಗಿರು ಜಸ್ಪ್ರೀತ್ ಬುಮ್ರಾ ಬಗ್ಗೆಯೂ ಮಾತನಾಡಿರುವ 25 ವರ್ಷದ ಟಿಮ್ ಡೇವಿಡ್, ನೆಟ್ಸ್ನಲ್ಲಿ ಬುಮ್ರಾ ಬೌಲಿಂಗ್ ಎದುರಿಸುವುದು ನನ್ನನ್ನು ನಾನೇ ಪರೀಕ್ಷಿಸಿಕೊಳ್ಳಲು ದೊರೆತ ಅವಕಾಶ ಎಂದು ಹೇಳಿಕೊಂಡಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.