ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬ ಹೆಗ್ಗಳಿಕೆ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022ಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಚ್ 26ರಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಹೊಸ ಸ್ವರೂಪದೊಂದಿಗೆ ನಡೆಯುತ್ತಿರುವ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಐಪಿಎಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ತಯಾರಿ ಮಾಡಿಕೊಂಡಿರುವ ಬಿಸಿಸಿಐ, ಚುಟುಕು ಕ್ರಿಕೆಟ್ ಕದನದ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾರ್ಚ್ 26ರಂದು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
ಮಾ.27ರಂದು ಪಂದ್ಯಾವಳಿಯ ಮೊದಲ ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹಣಾಹಣಿ ನಡೆಸಿದರೆ. 2ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ. ಇನ್ನೂ ಪ್ರಸಕ್ತ ಸೀಸನ್ನಲ್ಲಿ ಐಪಿಎಲ್ಗೆ ಎಂಟ್ರಿಕೊಟ್ಟಿರುವ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಂಬೈನ ವಾಂಖೆಡೆ ಅಂಗಳದಲ್ಲಿ ಮುಖಾಮುಖಿಯಾಗಲಿವೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, 6 ಪಂದ್ಯಗಳು ಶನಿವಾರದಂದು ನಡೆದರೆ, 6 ಪಂದ್ಯಗಳು ಭಾನುವಾರದಂದು ನಡೆಯಲಿದೆ. ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯ ಮೇ 22ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ.
ಮಾ.26ರಿಂದ ಮೇ 22ರವರೆಗೆ ಒಟ್ಟು 65 ದಿನಗಳ ಕಾಲ ನಡೆಯುವ ಐಪಿಎಲ್ ಪಂದ್ಯಾವಳಿಯಲ್ಲಿ 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇ-ಆಫ್ ಪಂದ್ಯಗಳು ನಡೆಯಲಿದೆ. ಮೇ 24ರಿಂದ ಪಂದ್ಯಾವಳಿಯ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು, ಮೇ29ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಡಬಲ್ ಹೆಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ರಿಂದ ನಡೆಯಲಿದ್ದು, ಎರಡನೇ ಪಂದ್ಯ ರಾತ್ರಿ 7.30ರಿಂದ ನಡೆಯಲಿದೆ.