ಆರಂಭಿಕ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್(73) ಹಾಗೂ ಅಂಬಟಿ ರಾಯುಡು(46) ಅದ್ಭುತ 92 ರನ್ಗಳ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 169 ರನ್ ಪೈಪೋಟಿ ಮೊತ್ತ ಕಲೆಹಾಕಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸಿಎಸ್ಕೆ 20 ಓವರ್ಗಳಲ್ಲಿ 5 ವಿಕೆಟ್ಗೆ 169 ರನ್ ಕಲೆಹಾಕಿತು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 73, ಅಂಬಟಿ ರಾಯುಡು 46 ಜವಾಬ್ದಾರಿಯ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು.
ಗಾಯಕ್ವಾಡ್-ರಾಯುಡು ಆಸರೆ:
ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್, ರಾಬಿನ್ ಉತ್ತಪ್ಪ(3) ಹಾಗೂ ಮೊಯಿನ್ ಅಲಿ(1) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಈ ಹಂತದಲ್ಲಿ ಜೊತೆಯಾದ ಋತುರಾಜ್ ಗಾಯಕ್ವಾಡ್(73) ಹಾಗೂ ಅಂಬಟಿ ರಾಯುಡು(46) ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ನೆರವಾದರು.
ಗುಜರಾತ್ ಟೈಟನ್ಸ್ ತಂಡದ ಬಲಿಷ್ಠ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಗಾಯಕ್ವಾಡ್, 73 ರನ್(48 ಬಾಲ್, 5 ಬೌಂಡರಿ, 5 ಸಿಕ್ಸ್) ಮೂಲಕ ಪ್ರಸಕ್ತ ಐಪಿಎಲ್ನ ಮೊದಲ ಅರ್ಧಶತಕ ಬಾರಿಸಿದರು. ಇವರಿಗೆ ಸಾಥ್ ನೀಡಿದ ಅಂಬಟಿ ರಾಯುಡು 46 ರನ್(31 ಬಾಲ್, 4 ಬೌಂಡರಿ, 2 ಸಿಕ್ಸ್) ಉಪಯುಕ್ತ ಕಾಣಿಕೆ ನೀಡಿದರು. ಈ ಇಬ್ಬರು 3ನೇ ವಿಕೆಟ್ಗೆ 92 ರನ್ಗಳ ಜೊತೆಯಾಟದ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದರು. ಕೊನೆ ಹಂತದಲ್ಲಿ ಕಣಕ್ಕಿಳಿದ ಶಿವಂ ದುಬೆ(19), ರವೀಂದ್ರ ಜಡೇಜಾ(22*) ಉತ್ತಮ ಪ್ರದರ್ಶಿಸಿದರು. ಈ ಇಬ್ಬರು 5ನೇ ವಿಕೆಟ್ಗೆ 38 ರನ್ಗಳ ಜೊತೆಯಾಟದಿಂದ ತಂಡದ ಮೊತ್ತವನ್ನ 169ಕ್ಕೆ ಏರಿಸಿದರು. ಗುಜರಾತ್ ಟೈಟನ್ಸ್ ಪರ ಅಲ್ಜರಿ ಜೋಸಫ್ 2, ಯಶ್ ದಯಾಳ್ ಹಾಗೂ ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.