IPL 2022- RCB Vs RR ಅಂಕಿ ಆಂಶಗಳಲ್ಲಿ ಆರ್ ಸಿಬಿ ಫೇವರಿಟ್.. ಆದ್ರೂ ರಾಜಸ್ತಾನ ರಾಯಲ್ಸ್ ಗೆಲ್ಲುವ ನೆಚ್ಚಿನ ತಂಡ..!
ಏಪ್ರಿಲ್ 26. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 39. ಸಮಯ – ರಾತ್ರಿ 7.30. ಪುಣೆಯ ಎಮ್ ಸಿಎ ಅಂಗಣ. ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಕಾದಾಟ..!
ಹೀನಾಯ ಸೋಲಿನ ಪೆಟ್ಟು ತಿಂದಿರುವ ಆರ್ ಸಿಬಿ ತಂಡ ಗೆಲುವಿನ ನಗೆಯಲ್ಲಿ ತೇಲಾಡುತಿರುವ ರಾಜಸ್ತಾನ ರಾಯಲ್ಸ್ ವಿರುದ್ಧ ಗೆಲ್ಲುವ ಲೆಕ್ಕಚಾರದಲ್ಲಿದೆ.
ಹಾಗಂತ ರಾಜಸ್ತಾನ ರಾಯಲ್ಸ್ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭವಿಲ್ಲ. ಜೋಸ್ ಬಟ್ಲರ್ ಬ್ಯಾಟಿಂಗ್ ಫಾರ್ಮ್ ಜೊತೆಗೆ ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟದೊಂದಿಗೆ ಶಿಮ್ರೋನ್ ಹೆಟ್ಮೇರ್ ಸ್ಪೋಟಕ ಆಟ ಎಂತಹ ಪರಿಸ್ಥಿತಿಯಲ್ಲೂ ಪಂದ್ಯದ ಗತಿಯನ್ನೇ ಬದಲಾಯಿಸಬಹುದು. ಮತ್ತೊಂದೆಡೆ ರಾಜಸ್ತಾನ ರಾಯಲ್ಸ್ ತಂಡದ ಬೌಲಿಂಗ್ ವಿಭಾಗ ಕೂಡ ಅತ್ಯುತ್ತಮ ಮಟ್ಟದಲ್ಲಿದೆ. ಟ್ರೆಂಟ್ ಬೌಲ್ಟ್, ಮೆಕ್ ಕಾಯ್, ಪ್ರಸಿದ್ಧ್ ಕೃಷ್ಣ ಅವರ ಉರಿ ಎಸೆತಗಳೊಂದಿಗೆ ಚಾಹಲ್ ಮತ್ತು ಅಶ್ವಿನ್ ಸ್ಪಿನ್ ಎಸೆತಗಳು ಕೂಡ ಆರ್ ಸಿಬಿ ಬ್ಯಾಟರ್ ಗಳಿಗೆ ಸವಾಲಾಗ ಪರಿಣಮಿಸಲಿದೆ. IPL 2022- Royal Challengers Bengaluru vs Rajastan Royals HEAD-TO-HEAD Records –
ಇನ್ನೊಂದೆಡೆ ಆರ್ ಸಿಬಿ ಬ್ಯಾಟರ್ ಗಳು ಮತ್ತೆ ಲಯಕಂಡುಕೊಳ್ಳಬೇಕಿದೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಒತ್ತಡದಿಂದ ಹೊರಬಂದು ಆಡಬೇಕಿದೆ. ಫಾಫ್ ಡುಪ್ಲೇಸಸ್, ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಸ್ಪೋಟಕ ಆಟದ ಮೇಲೆ ಆರ್ ಸಿಬಿ ನಿಂತಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಝೆಲ್ ವುಡ್ ಗೆ ಹರ್ಷೆಲ್ ಪಟೇಲ್ ಮತ್ತು ಮಹಮ್ಮದ್ ಸೀರಾಜ್ ಸಾಥ್ ನೀಡಬೇಕಿದೆ. ವನಿಂದು ಹಸರಂಗ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ಇನ್ನು ತಂಡಗಳ ಅಂಕಿ ಅಂಶಗಳನ್ನು ನೋಡಿದಾಗ ಆರ್ ಸಿಬಿ ತಂಡ ಮೇಲುಗೈ ಸಾಧಿಸಿದೆ. ಐಪಿಎಲ್ ನಲ್ಲಿ ಒಟ್ಟು 26 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ಆರ್ ಸಿಬಿ 13 ಪಂದ್ಯಗಳನ್ನು ಗೆದ್ದುಕೊಂಡ್ರೆ, ರಾಜಸ್ತಾನ ರಾಯಲ್ಸ್ 10 ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಇನ್ನು ಕಳೆದ ಐದು ಪಂದ್ಯಗಳ ಫಲಿತಾಂಶ ಪ್ರಕಾರ ಆರ್ ಸಿಬಿ ವಿರುದ್ಧ ರಾಜಸ್ತಾನ ರಾಯಲ್ಸ್ ಐದು ಪಂದ್ಯಗಳನ್ನು ಸೋತಿದೆ. ಇಲ್ಲಿ ಅಂಕಿ ಅಂಶಗಳು ಆರ್ ಸಿಬಿ ತಂಡಕ್ಕೆ ಪೂರಕವಾಗಿದೆ.
ಆದ್ರೆ ನೆನಪಿಡಿ, ಈ ಬಾರಿಯ ರಾಜಸ್ತಾನ ರಾಯಲ್ಸ್ ತಂಡ ಹಳೆಯ ರಾಜಸ್ತಾನ ರಾಯಲ್ಸ್ ತಂಡವಲ್ಲ. ನಿರೀಕ್ಷೆಗಳನ್ನು ಹುಸಿಗೊಳಿಸಿ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದೆ. ಸಮಬಲದ ಜೊತೆಗೆ ಹೊಂದಾಣಿಕೆಯ ಆಟವನ್ನಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡವನ್ನು ಆರ್ ಸಿಬಿ ಮಣಿಸಲು ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಬೇಕಿದೆ. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಆರ್ ಸಿಬಿಗಿಂತಲೂ ರಾಜಸ್ತಾನ ರಾಯಲ್ಸ್ ಗೆಲ್ಲುವ ಫೆವರೀಟ್ ತಂಡವಾಗಿದೆ.