ಜೋಶ್ ಹೇಜ಼ಲ್ವುಡ್(4/25) ಚಾಣಾಕ್ಷ ಬೌಲಿಂಗ್ ಹಾಗೂ ನಾಯಕ ಫಾಫ್ ಡುಪ್ಲೆಸ್ಸಿ(96) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ, ಆಲ್ರೌಂಡ್ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು, 20 ಓವರ್ಗಳಲ್ಲಿ 181/5 ಅದ್ಭುತ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಲಕ್ನೋ 20 ಓವರ್ಗಳಲ್ಲಿ 163/8 ರನ್ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ 18 ರನ್ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 10 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿದೆ.
ಜೋಶ್ ತುಂಬಿದ ಹೇಜ಼ಲ್ವುಡ್:
ಆರ್ಸಿಬಿ ನೀಡಿದ 182 ರನ್ಗಳ ಪೈಪೋಟಿಯ ಸವಾಲು ಎದುರಿಸಿದ ಲಕ್ನೋ ತಂಡಕ್ಕೆ ಜೋಶ್ ಹೇಜ಼ಲ್ವುಡ್(4-0-25-4) ಚಾಣಾಕ್ಷ ಬೌಲಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಕಮಾಲ್ ಮಾಡಿದ ಹೇಜ಼ಲ್ವುಡ್, ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಕಬಳಿಸುವ ಮೂಲಕ ಲಕ್ನೋ ತಂಡಕ್ಕೆ ಆಘಾತ ನೀಡಿದರು. ಅಲ್ಲದೆ ಆರ್ಸಿಬಿ ಗೆಲುವಿನ ಜೋಶ್ ಹೆಚ್ಚಿಸಿದ ಹೇಜ಼ಲ್ವುಡ್ ಅವರಿಗೆ ಹರ್ಷಲ್ ಪಟೇಲ್ 2, ಸಿರಾಜ್ ಮತ್ತು ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
ಲಕ್ನೋ ಬ್ಯಾಟಿಂಗ್ ವೈಫಲ್ಯ:
ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಚೇಸಿಂಗ್ನಲ್ಲಿ ಮುಗ್ಗರಿಸಿತು. ಆರಂಭಿಕರಾಗಿ ಬಂದ ಕ್ವಿಂಟನ್ ಡಿಕಾಕ್(3), ಕೆ.ಎಲ್.ರಾಹುಲ್(30) ಉತ್ತಮ ಆರಂಭ ನೀಡಲಿಲ್ಲ. ನಂತರ ಬಂದ ಮನೀಷ್ ಪಾಂಡೆ(6) ಸಹ ಬಹುಬೇಗನೆ ನಿರ್ಗಮಿಸಿದರು. ಬಳಿಕ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ಕೃನಾಲ್ ಪಾಂಡ್ಯ(42) ಜವಾಬ್ದಾರಿಯ ಆಟವಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡ(13), ಬಡೋನಿ(13), ಸ್ಟಾಯ್ನಿಸ್(24) ಹಾಗೂ ಹೋಲ್ಡರ್(16) ತಂಡಕ್ಕೆ ಗೆಲುವು ತಂದುಕೊಡಲಿಲ್ಲ.
ಡುಪ್ಲೆಸ್ಸಿ ಭರ್ಜರಿ ಆಟ:
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ, ಆರಂಭಿಕ ಆಘಾತ ಅನುಭವಿಸಿತು. ಅನುಜ್ ರಾವತ್(4), ವಿರಾಟ್ ಕೊಹ್ಲಿ(0) ಮೊದಲ ಓವರ್ನಲ್ಲೇ ಔಟಾದರೆ. ಗ್ಲೆನ್ ಮ್ಯಾಕ್ಸ್ವೆಲ್ (23) ಹಾಗೂ ಸುಯಾಶ್ ಪ್ರಭುದೇಸಾಯಿ(10) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಹೀಗಾಗಿ ಪವರ್-ಪ್ಲೇ ಮುಕ್ತಾಯಕ್ಕೂ ಮೊದಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿತು.
ಆದರೆ ನಾಯಕ ಫಾಫ್ ಡುಪ್ಲೆಸ್ಸಿ 96 ರನ್(64 ಬಾಲ್, 11 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕನಾಗಿ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್, ಐಪಿಎಲ್ನಲ್ಲಿ 50ನೇ ಅರ್ಧಶತಕ ದಾಖಲಿಸಿದರು. ಕೊನೆ ಹಂತದವರೆಗೂ ತಾಳ್ಮೆಯ ಆಟವಾಡಿದ ಡುಪ್ಲೆಸ್ಸಿ, ತಂಡಕ್ಕೆ ಆಸರೆಯಾದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಹಬಾಜ್ ಅಹ್ಮೆದ್ 26(22) ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೇ ಡುಪ್ಲೆಸ್ಸಿ ಹಾಗೂ ಶಹಬಾಜ್ ಜೋಡಿ 4ನೇ ವಿಕೆಟ್ಗೆ 70 ರನ್ಗಳ ಅದ್ಭುತ ಜೊತೆಯಾಟವಾಡಿದರು. ನಂತರ ಬಂದ ದಿನೇಶ್ ಕಾರ್ತಿಕ್ 13* ರನ್(8 ಬಾಲ್, 1 ಸಿಕ್ಸ್) ಮೂಲಕ ಡುಪ್ಲೆಸ್ಸಿಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರು 6ನೇ ವಿಕೆಟ್ಗೆ 49 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನ 180ರ ಗಡಿದಾಟಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಪರ ಜೇಸನ್ ಹೋಲ್ಡರ್(2/25), ದುಶ್ಮಂತ ಚಮೀರ(2/31) ಹಾಗೂ ಕೃನಾಲ್ ಪಾಂಡ್ಯ(1/29) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.