ಸತತ ಸೋಲುಗಳಿಂದ ಆಘಾತ ಅನುಭವಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವ ಮುಂಬೈ ಇಂಡಿಯನ್ಸ್, ಮತ್ತೊಂದು ಸೋಲನುಭವಿಸುವ ಮೂಲಕ ದೊಡ್ಡ ಆಘಾತ ಎದುರಿಸಿದೆ. ಬೌಲರ್ಗಳ ದುಬಾರಿ ಬೌಲಿಂಗ್, ಬ್ಯಾಟ್ಸ್ಮನ್ಗಳ ವೈಫಲ್ಯ, ಐದು ಬಾರಿಯ ಚಾಂಪಿಯನ್ ತಂಡಕ್ಕೆ 15ನೇ ಆವೃತ್ತಿಯ ಐಪಿಎಲ್ನಲ್ಲಿ ಸತತ 6ನೇ ಸೋಲಿಗೆ ಕಾರಣವಾಗಿದೆ.
ಮುಂಬೈನ ಬ್ರಬೋರ್ನ್ ಅಂಗಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ, ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಟಾಸ್ ಗೆದ್ದ ರೋಹಿತ್ ಶರ್ಮ, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕನ್ನಡಿಗ ಕೆ.ಎಲ್.ರಾಹುಲ್(103*) ಅಬ್ಬರದ ಬ್ಯಾಟಿಂಗ್ ಎದುರು ಮಂಕಾದ ಮುಂಬೈ ಬೌಲರ್ಗಳು ದುಬಾರಿ ರನ್ಬಿಟ್ಟುಕೊಟ್ಟರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 199/4 ರನ್ಗಳ ಅದ್ಭುತ ಮೊತ್ತಗಳಿಸಿತು. ಆದರೆ ಈ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್, ಪ್ರಮುಖ ಹಂತದಲ್ಲಿ ವಿಕೆಟ್ಗಳನ್ನ ಕಳೆದುಕೊಂಡು 181/9 ರನ್ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 18 ರನ್ಗಳ ಸೋಲೊಪ್ಪಿಕೊಂಡ ರೋಹಿತ್ ಶರ್ಮ ಪಡೆ, 2022ರ ಐಪಿಎಲ್ ಟೂರ್ನಿಯಲ್ಲಿ 6ನೇ ಸೋಲು ಕಂಡಿತು.
MI ಸಾಧಾರಣ ಆರಂಭ:
200 ರನ್ಗಳ ಚೇಸ್ ಆರಂಭಿಸಿದ ಮುಂಬೈ ಇಂಡಿಯನ್ಸ್, ಸಾಧಾರಣ ಆರಂಭ ಕಂಡಿತು. ಓಪನರ್ಗಳಾಗಿ ಬಂದ ನಾಯಕ ರೋಹಿತ್ ಶರ್ಮ(6) ಹಾಗೂ ಇಶಾನ್ ಕಿಶನ್(13) ಉತ್ತಮ ಆರಂಭ ಒದಗಿಸಲಿಲ್ಲ. ನಂತರ ಬಂದ ಡೆವಾಲ್ಡ್ ಬ್ರೆವಿಸ್ 31(13) ಬಿರುಸಿನ ಆಟವಾಡಿ ಹೊರನಡೆದರು. ಹೀಗಾಗಿ 57 ರನ್ಗಳಿಗೆ ಆರಂಭಿಕ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್(37) ಹಾಗೂ ತಿಲಕ್ ವರ್ಮ(26) ಎಚ್ಚರಿಕೆಯ ಆಟವಾಡಿದರು. 4ನೇ ವಿಕೆಟ್ಗೆ 64 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ ಈ ಜೋಡಿ, ತಂಡದ ಗೆಲುವಿನ ಆಸೆಯನ್ನ ಜೀವಂತ ಇರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಕೈರನ್ ಪೊಲಾರ್ಡ್(25), ಫ್ಯಾಬಿಯನ್ ಅಲೆನ್(8), ಜಯದೇವ್ ಉನಾತ್ಕಟ್(14), ಮುರುಗನ್ ಅಶ್ವಿನ್(6) ತಂಡಕ್ಕೆ ಆಸರೆ ಆಗಲಿಲ್ಲ.
ಲಕ್ನೋ ಸಾಂಘಿಕ ದಾಳಿ:
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬೌಲರ್ಗಳು ಅದ್ಭುತ ಪ್ರದರ್ಶನದಿಂದ ನೆರವಾದರು. ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ಆವೇಶ್ ಖಾನ್(3/30) ಪ್ರಮುಖ ವಿಕೆಟ್ ಪಡೆದು ಮುಂಬೈ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ. ಜೇಸನ್ ಹೋಲ್ಡರ್, ದುಶ್ಮಂತ್ ಚಮೀರ, ರವಿ ಬಿಷ್ಣೋಯಿ ಹಾಗೂ ಮಾರ್ಕಸ್ ಸ್ಟಾಯ್ನಿಸ್ ತಲಾ 1 ವಿಕೆಟ್ ಪಡೆದರು.
ರಾಹುಲ್ ಶತಕದ ಅಬ್ಬರ
ಮುಂಬೈ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕೆ.ಎಲ್. ರಾಹುಲ್ 103* ರನ್(60 ಬಾಲ್, 9 ಬೌಂಡರಿ, 5 ಸಿಕ್ಸ್) ಮೂಲಕ ತಂಡಕ್ಕೆ ನೆರವಾದರು. ಇನ್ನಿಂಗ್ಸ್ ಅಂತ್ಯದವರೆಗೂ ಜವಾಬ್ದಾರಿಯ ಆಟವಾಡಿದ ನಾಯಕ ರಾಹುಲ್, ಐಪಿಎಲ್ನ 3ನೇ ಶತಕಗಳಿಸಿ ಮಿಂಚಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್(24), ಮನೀಷ್ ಪಾಂಡೆ(38), ಮಾರ್ಕಸ್ ಸ್ಟಾಯ್ನಿಸ್(10) ಹಾಗೂ ದೀಪಕ್ ಹೂಡ(15) ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಮುಂಬೈ ಪರ ಉನಾದ್ಕಟ್ 2, ಅಶ್ವಿನ್, ಫ್ಯಾಬಿಯನ್ ಅಲೆನ್ ತಲಾ 1 ವಿಕೆಟ್ ಪಡೆದರು.