ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್, ರಿಯಾನ್ ಪರಾಗ್(56*) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 144 ರನ್ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಪುಣೆಯ ಎಂಸಿಎ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಬೌಲರ್ಗಳು, ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ಗಳಲ್ಲಿ 8 ವಿಕೆಟ್ಗೆ 144 ರನ್ಗಳಿಗೆ ಕಟ್ಟಿಹಾಕಿದರು. ರಾಜಸ್ಥಾನ್ ಪರ ರಿಯಾನ್ ಪರಾಗ್(56*), ಸಂಜೂ ಸ್ಯಾಮ್ಸನ್(27) ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ತಂಡಕ್ಕೆ ಆಸರೆಯಾದರು.
ರಾಜಸ್ಥಾನ್ಗೆ ಪರಾಗ್ ಆಸರೆ:
ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ಗೆ ರಿಯಾನ್ ಪರಾಗ್ 56* ರನ್(31 ಬಾಲ್, 3 ಬೌಂಡರಿ, 4 ಸಿಕ್ಸ್) ಆಸರೆಯಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ನೆಲಕಚ್ಚಿ ನಿಂತು ಆಟವಾಡಿದ ರಿಯಾನ್ ಪರಾಗ್, ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೇ ತಂಡದ ಮೊತ್ತವನ್ನು 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.
RR ಬ್ಯಾಟಿಂಗ್ ವೈಫಲ್ಯ:
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್ಗಳಾಗಿ ಕಣಕ್ಕಿಳಿದ ಜಾಸ್ ಬಟ್ಲರ್(8) ಹಾಗೂ ದೇವದತ್ ಪಡಿಕ್ಕಲ್(7) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ನಂತರ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಆರ್.ಅಶ್ವಿನ್(17) ಬಿರುಸಿನ ಆಟವಾಡಿ ಹೊರನಡೆದರು. ನಾಯಕ ಸಂಜೂ ಸ್ಯಾಮ್ಸನ್(27) ಉಪಯುಕ್ತ ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಡ್ಯಾರೆಲ್ ಮಿಚೆಲ್(16) ಸಹ ನಿರೀಕ್ಷಿತ ಆಟವಾಡಲಿಲ್ಲ. ನಂತರ ಬಂದ ಶಿಮ್ರಾನ್ ಹೆಟ್ಮಾಯೆರ್(3) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ಟ್ರೆಂಟ್ ಬೋಲ್ಟ್(5), ಪ್ರಸಿದ್ಧ್ ಕೃಷ್ಣ(2) ಬಹುಬೇಗನೆ ವಿಕೆಟ್ ಕೈಚಲ್ಲಿದರು.
ಹೇಜ಼ಲ್ವುಡ್ ಶಿಸ್ತಿನ ದಾಳಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲರ್ಗಳು ಸಾಂಘಿಕ ಪ್ರದರ್ಶನ ನೀಡಿದರು. ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಜಾಶ್ ಹೇಜ಼ಲ್ವುಡ್(2/19) ಪ್ರಮುಖ ವಿಕೆಟ್ ಪಡೆದು ಮಿಂಚಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ವನಿಂದು ಹಸರಂಗ(2/23) ಹಾಗೂ ಮೊಹಮ್ಮದ್ ಸಿರಾಜ್(2/30), ಹರ್ಷಲ್ ಪಟೇಲ್(1/33) ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು.