ಐಪಿಎಲ್ 2022ರಲ್ಲಿ ಯಾರಾಗಾಲಿದ್ದಾರೆ ಆರ್ಸಿಬಿ ಕ್ಯಾಪ್ಟನ್? ಈ ಪ್ರಶ್ನೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಹಲವು ತಿಂಗಳಿಂದ ಕುತೂಹಲ ಮೂಡಿಸಿರುವ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡೋಕ್ಕೆ ಆರ್ಸಿಬಿ ಫ್ರಾಂಚೈಸಿ ಮುಂದಾಗಿದ್ದು, ಇದಕ್ಕಾಗಿ ಮಾರ್ಚ್ 12ಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ದಿನದಿಂದಲೂ ಆರ್ಸಿಬಿ ತಂಡದ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಈ ನಡುವೆ ನಾಯಕನ ಸ್ಥಾನ ತುಂಬಲಿರುವ ಆಟಗಾರನ ಕುರಿತು ಹಲವು ಹೆಸರುಗಳು ಹರಿದಾಡುತ್ತಿದ್ದರೂ, ನಾಯಕನ ಪಟ್ಟ ಯಾರಿಗೆ ಸಿಗಲಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮತ್ತೊಂದೆಡೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸದಾಗಿ ಸೇರ್ಪಡೆ ಆಗಿರುವ ಎರಡು ತಂಡಗಳು ಸೇರಿದಂತೆ ಇತರೆ ಎಲ್ಲಾ ತಂಡಗಳು ಸಹ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ರಾಯಲ್ ಚಾಲೆಂಜರ್ಸ್ ತಂಡ ಮಾತ್ರ ನಾಯಕನ ಘೋಷಣೆ ಮಾಡದಿರುವುದು ಕೋಟ್ಯಾಂತರ ಫ್ಯಾನ್ಗಳಲ್ಲಿ ಕುತೂಹಲ ಮೂಡಿಸಿತ್ತು.
ಇದೀಗ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಆರ್ಸಿಬಿ ಫ್ರಾಂಚೈಸಿ ತೀರ್ಮಾನಿಸಿದ್ದು, ಇದಕ್ಕಾಗಿ ಮಾರ್ಚ್ 12ರಂದು ಮುಹೂರ್ತ ಫಿಕ್ಸ್ ಮಾಡಿದೆ. ಈ ಕುರಿತು ಸಣ್ಣ ಸುಳಿವು ನೀಡಿರುವ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ “ಆರ್ಸಿಬಿ ಅನ್ಬಾಕ್ಸ್”ವೊಂದನ್ನು ಬಿಡುಗಡೆ ಮಾಡಿದ್ದು, ಆ ಮೂಲಕ ಮಾರ್ಚ್ 12ರಂದು ಹೊಸ ನಾಯಕನ ಹೆಸರನ್ನು ಘೋಷಣೆ ಮಾಡುವ ಸುಳಿವು ನೀಡಿದೆ ಎನ್ನಲಾಗಿದೆ.
ಇನ್ನು ಆರ್ಸಿಬಿ ಬಿಡುಗಡೆ ಮಾಡಿರುವ “ಆರ್ಸಿಬಿ ಅನ್ಬಾಕ್ಸ್”ಗೆ ಹಲವು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಹೊಸ ನಾಯಕನ ಹೆಸರು ಘೋಷಿಸುವುದಾಗಿ ಹೇಳಿದ್ದಾರೆ. ಕೆಲವರು ಫಾಫ್ ಡುಪ್ಲೆಸ್ಸಿ ಅವರೇ ಹೊಸ ಕ್ಯಾಪ್ಟನ್ ಎಂದು ಕಮೆಂಟ್ ಮಾಡಿದ್ದರೆ, ಕೆಲವರು ಗ್ಲೆನ್ ಮ್ಯಾಕ್ಸ್ವೆಲ್ ಅವರ ಹೆಸರನ್ನು ಪ್ರಸ್ತಾಪಿಸಿ ಕಮೆಂಟ್ ಮಾಡಿದ್ದಾರೆ. ಇನ್ನೊಂದೆಡೆ ಮುಂದಿನ 24 ಗಂಟೆಗಳಲ್ಲಿ ಆರ್ಸಿಬಿ ತಂಡದ ಹೊಸ ಕ್ಯಾಪ್ಟನ್ ಘೋಷಣೆ ಮಾಡಲಾಗುವುದು ಎಂಬ ಸುದ್ದಿಯೂ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.