IPL 2022- ನಾಯಕತ್ವದಿಂದ ಪಲಾಯನ ಮಾಡಿದ್ದಾತ RCB ನಾಯಕನಾಗ್ತಾನಾ?

ಐಪಿಎಲ್-15 ಟೂರ್ನಿ ಆರಂಭಕ್ಕೆ ಉಳಿದಿರುವುದಿನ್ನು ಕೇವಲ 15 ದಿನ ಮಾತ್ರ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿನ್ನೂ ತನ್ನ ನಾಯಕ ಯಾರು ಎಂಬುದನ್ನು ಪ್ರಕಟಿಸಿಲ್ಲ. ಕೆಲ ವರದಿಗಳ ಪ್ರಕಾರ ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್, RCB ತಂಡದ ನೂತನ ನಾಯಕರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ದಿನೇಶ್ ಕಾರ್ತಿಕ್ RCB ನಾಯಕತ್ವಕ್ಕೆ ಸೂಕ್ತ ಆಯ್ಕೆಯೇ? ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವವಿದೆ, ಐಪಿಎಲ್’ನ ಅತ್ಯಂತ ಅನುಭವಿಗಳಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ನಾಯಕನಾಗಿಯೂ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದೆ. RCB ನಾಯಕನಾಗಲು ಇಷ್ಟೇ ಸಾಕೇ? IPL 2022 -rcb – when you have an able leader in Dinesh karthik
2020ರ ಐಪಿಎಲ್ ಟೂರ್ನಿಯ ಮಧ್ಯದಲ್ಲೇ ದಿನೇಶ್ ಕಾರ್ತಿಕ್ ಕೆಕೆಆರ್ ತಂಡದ ನಾಯಕತ್ವವನ್ನು ತೊರೆದಿದ್ದ ಆಟಗಾರ. ವೈಯಕ್ತಿಕ ಫಾರ್ಮ್, ತಂಡದ ಕಳಪೆ ಆಟದ ನೆಪ ನೀಡಿ ಟೂರ್ಮಿ ಮಧ್ಯೆಯೇ ಕೆಕೆಆರ್ ನಾಯಕತ್ವದಿಂದ ಕಾರ್ತಿಕ್ ಪಲಾಯನ ಮಾಡಿದ್ದರು. ಒಬ್ಬ ಒಳ್ಳೆಯ ನಾಯಕನಾದವನು ತಂಡವನ್ನು ಯಾವತ್ತೂ ನಡು ನೀರಿನಲ್ಲಿ ಕೈಬಿಡಲಾರ. ಫ್ರಾಂಚೈಸಿ ಒತ್ತಡವೋ, ವೈಯಕ್ತಿಕ ನಿರ್ಧಾರವೋ ಗೊತ್ತಿಲ್ಲ. ದಿನೇಶ್ ಕಾರ್ತಿಕ್ ಟೂರ್ನಿ ನಡುವೆಯೇ ಕೆಕೆಆರ್ ಕ್ಯಾಪ್ಟನ್ಸಿ ತೊರೆದದ್ದಂತೂ ನಿಜ. ಇಂತಹ ಆಟಗಾರನಿಗೆ ರಾಯಲ್ ಚಾಲೆಂಜರ್ಸ್ ತಂಡ ನಾಯಕತ್ವದ ಪಟ್ಟ ಕಟ್ಟಲಿದೆಯೇ ಎಂಬುದು ಈಗ ಯಕ್ಷ ಪ್ರಶ್ನೆ.

2015ರಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಪರ ಆಡಿದ್ದರು. ಈ ವರ್ಷದ ಐಪಿಎಲ್ ಹರಾಜಿನಲ್ಲಿ RCB ಫ್ರಾಂಚೈಸಿ ದಿನೇಶ್ ಕಾರ್ತಿಕ್ ಅವರನ್ನು 12.5 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಆದರೆ ತಂಡ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ದಿನೇಶ್ ಕಾರ್ತಿಕ್ ವಿಫಲರಾಗಿದ್ದರು. ಆ ವರ್ಷ 16 ಪಂದ್ಯಗಳನ್ನಾಡಿದ್ದ ಕಾರ್ತಿಕ್, ಕೇವಲ 12.81ರ ಸರಾಸರಿಯಲ್ಲಿ 141 ರನ್ ಗಳಿಸಿದ್ದರು. ಆ 16 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವೂ ಬಂದಿರಲಿಲ್ಲ.
ಈ ವರ್ಷ ಮತ್ತೆ ದಿನೇಶ್ ಕಾರ್ತಿಕ್ ಅವರನ್ನು RCB ಐದೂವರೆ ಕೋಟಿ ರೂ. ಕೊಟ್ಟು ಖರೀದಿಸಿದ್ದು, ಅವರೇ ತಂಡದ ನಂ.1 ವಿಕೆಟ್ ಕೀಪರ್ ಆಗಲಿದ್ದಾರೆ. ಇದುವರೆಗೆ ಒಟ್ಟು 213 ಐಪಿಎಲ್ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, 25.77ರ ಸರಾಸರಿಯಲ್ಲಿ 19 ಅರ್ಧಶತಕಗಳ ಸಹಿತ 4046 ರನ್ ಗಳಿಸಿದ್ದಾರೆ.