IPL 2022- RCB – ಹರ್ಷೆಲ್ ಪಟೇಲ್ ಗೆ ಪ್ರೇರಣೆಯಾದ ಅಕ್ಕನ ಕೊನೆಯ ಮಾತು..!
ಹರ್ಷೆಲ್ ಪಟೇಲ್.. ಟೀಮ್ ಇಂಡಿಯಾದ ವೇಗಿ. ಆರ್ ಸಿಬಿಯ ಟ್ರಂಪ್ ಕಾರ್ಡ್ ಬೌಲರ್. ತನ್ನ ಅಮೋಘ ಬೌಲಿಂಗ್ ದಾಳಿಯಿಂದಲೇ ಆರ್ ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಹರ್ಷೆಲ್ ಪಟೇಲ್ ಫುಲ್ ಜೋಶ್ ನಲ್ಲಿದ್ದರು. ಅಷ್ಟರಲ್ಲೇ ತನ್ನ ಸಹೋದರಿಯ ನಿಧನ ಸುದ್ದಿ ಬಂತು. ಹೀಗಾಗಿ ಹರ್ಷೆಲ್ ಪಟೇಲ್ ತಕ್ಷಣವೇ ಬಯೋಬಬಲ್ ಅನ್ನು ತ್ಯಜಿಸಿದ್ರು. ಅಕ್ಕನ ಅಂತಿಮ ವಿಧಿ ವಿಧಾನ ಕಾರ್ಯ ಮುಗಿಸಿ ಮತ್ತೆ ಬಯೋಬಬಲ್ ಅನ್ನು ಸೇರಿಕೊಂಡರು.
ಒಂದು ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದ ಹರ್ಷೆಲ್ ಪಟೇಲ್ ಏಪ್ರಿಲ್ 16ರಂದು ನಡೆದಿದ್ದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಹರ್ಷೆಲ್ ಪಟೇಲ್ ವಿಕೆಟ್ ಪಡೆದುಕೊಳ್ಳಲಿಲ್ಲ. 4 ಓವರ್ ಗಳಲ್ಲಿ 40 ರನ್ ನೀಡಿದ್ದರು.
ಈ ನಡುವೆ ಸಹೋದರಿಯ ನಿಧನದ ಆಘಾತದಿಂದ ಹರ್ಷೆಲ್ ಪಟೇಲ್ ಇನ್ನೂ ಬಂದಿಲ್ಲ. ಅಕ್ಕನ ನೆನಪು ಹರ್ಷೆಲ್ ಅವರಿಗೆ ಪದೇ ಪದೇ ಕಾಡುತ್ತಿದೆ. ನೋವಿನಲ್ಲೂ ಕ್ರಿಕೆಟ್ ಮೇಲಿನ ಬದ್ಧತೆ ಮತ್ತು ತಂಡದ ಮೇಲಿನ ಪ್ರೀತಿಗಾಗಿ ವೈಯಕ್ತಿಕ ಆಘಾತವನ್ನು ಮರೆತು ಹರ್ಷೆಲ್ ಪಟೇಲ್ ಆಡುತ್ತಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಣ ತಾಣದಲ್ಲಿ ತನ್ನ ಅಕ್ಕನ ಬಗ್ಗೆ ಹರ್ಷೆಲ್ ಪಟೇಲ್ ಬರೆದುಕೊಂಡಿದ್ದಾರೆ. ದೀದಿ..ನೀವು ನಮ್ಮ ಬದುಕಿನಲ್ಲಿ ಕರುಣಾಮಯಿ ಮತ್ತು ಸಂತೋಷದಾಯಕ ವ್ಯಕ್ತಿಯಾಗಿದ್ದೀರಿ. ಬದುಕಿನಲ್ಲಿ ಅನೇಕ ಕಷ್ಟ ನೋವುಗಳನ್ನು ಎದುರಿಸಿದ್ರೂ ನಿಮ್ಮ ಕೊನೆಯ ಉಸಿರು ಇರುವ ತನಕ ನಿಮ್ಮ ಮುಖದಲ್ಲಿ ಸದಾ ನಗು ಇರುತ್ತಿತ್ತು ಎಂದು ಹರ್ಷೆಲ್ ಪಟೇಲ್ ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ನಾನು ಭಾರತಕ್ಕೆ ಹಿಂತಿರುಗುವ ಮುನ್ನ ನೀವು ಆಸ್ಪತ್ರೆಯಲ್ಲಿದ್ದಾಗ ನೀವು ಹೇಳಿದ್ದ ಮಾತುಗಳು ನನಗೆ ಪ್ರೇರಣೆಯಾಗಿವೆ. ನನ್ನ ಬಗ್ಗೆ ಚಿಂತಿಸಬೇಡ. ನೀನು ನಿನ್ನ ಆಟದ ಕಡೆಗೆ ಗಮನಹರಿಸು ಎಂದು ಹೇಳಿದ್ದೀರಿ. ಆ ಮಾತಿನಿಂದಲೇ ನಾನು ಮತ್ತೆ ತಂಡವನ್ನು ಸೇರಿಕೊಂಡಿದ್ದು ಎಂದು ಹರ್ಷೆಲ್ ಪಟೇಲ್ ಬರೆದುಕೊಂಡಿದ್ದಾರೆ. IPL 2022- RCB pacer Harshal Patel pens emotional note for late sister
ಹರಿಯಾಣ ಮೂಲದ ಹರ್ಷೆಲ್ ಪಟೇಲ್ ಕುಟುಂಬದವರು 2009ರಲ್ಲಿ ಅಮೆರಿಕಾಗೆ ಶಿಫ್ಟ್ ಆಗಿದ್ದರು. ಆದ್ರೆ ಹರ್ಷೆಲ್ ಪಟೇಲ್ ಗಾಗಿ ಅವರ ಅಣ್ಣ ತಪನ್ ಪಟೇಲ್ ತಮ್ಮ ಕ್ರಿಕೆಟ್ ಬದುಕಿಗಾಗಿ ಭಾರತದಲ್ಲೇ ಉಳಿದುಕೊಂಡಿದ್ದರು. 2010ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಹರ್ಷೆಲ್ ಪಟೇಲ್ ಆಡಿದ್ದರು. ಹುಟ್ಟಿದ್ದು ಗುಜರಾತ್ ನ ಸನಾಂದ್ ನಲ್ಲಿ. ಆದ್ರೆ 2011ರಿಂದ ಹರ್ಷೆಲ್ ಪಟೇಲ್ ಅವರು ಹರಿಯಾಣ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಐಪಿಎಲ್ ನಲ್ಲಿ ಹರ್ಷೆಲ್ ಪಟೇಲ್ ಅವರು 2012ರಿಂದ 2017ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. 2018ರಿಂದ 20ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದರು. 2021ರಿಂದ ಮತ್ತೆ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ 2021ರ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಟೀಮ್ ಇಂಡಿಯಾದ ಟಿ-20 ತಂಡದಲ್ಲೂ ಹರ್ಷೆಲ್ ಪಟೇಲ್ ಕಾಣಿಸಿಕೊಂಡಿದ್ದರು .