IPL-2022 – RCB – ಐಪಿಎಲ್ ನಲ್ಲಿ ಮೂರು ಸಾವಿರ ರನ್ ದಾಖಲಿಸಿದ್ದ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಸ್..!
ಐಪಿಎಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಫಾಫ್ ಡುಪ್ಲೆಸಸ್ ಅವರು ಮೊದಲ ಪಂದ್ಯವನ್ನು ಆಡಿದ್ದಾರೆ.
ಮೊದಲ ಪಂದ್ಯದಲ್ಲೇ ತನ್ನ ಸಾಮಥ್ರ್ಯ ಪ್ರದರ್ಶಿಸಿದ 37ರ ಹರೆಯದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಸ್ ಅವರು ಹಲವು ಸಾಧನೆಗಳನ್ನು ಮಾಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ 57 ಎಸೆತಗಳಲ್ಲಿ ಅಬ್ಬರದ 88 ರನ್ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ರೂ ಆನಂತರ ಮಿಂಚಿನ ವೇಗದಲ್ಲಿ ಬ್ಯಾಟ್ ಬೀಸಿದ್ರು. ಅಲ್ಲದೆ ಫಾಫ್ ಡುಪ್ಲೆಸಸ್ ಬ್ಯಾಟ್ ನಿಂದ ಮೂರು ಬೌಂಡರಿ ಮತ್ತು ಏಳು ಸಿಕ್ಸರ್ ಗಳು ಸಿಡಿದಿದ್ದವು.
ಈ ಮೂಲಕ ಐಪಿಎಲ್ ನಲ್ಲಿ ಫಾಫ್ ಡುಪ್ಲೆಸಸ್ ಅವರು ತನ್ನ ಸಿಕ್ಸರ್ ಗಳ ಸಂಖ್ಯೆಯನ್ನು ನೂರರ ಗಡಿ ದಾಟಿಸಿದ್ರು. 101 ಪಂದ್ಯಗಳಲ್ಲಿ ಫಾಫ್ ಡುಪ್ಲೇಸಸ್ ಹೆಸರಿನಲ್ಲಿ 103 ಸಿಕ್ಸರ್ ಗಳು ಸೇರಿಕೊಂಡಿವೆ.
ಅಷ್ಟೇ ಅಲ್ಲ, ಐಪಿಎಲ್ ನಲ್ಲಿ ಮೂರು ಸಾವಿರ ರನ್ ದಾಖಲಿಸಿದ್ದ ಹಿರಿಮೆಗೂ ಪಾತ್ರರಾಗಿದ್ದಾರೆ. ಇನ್ನೊಂದೆಡೆ ವೇಗವಾಗಿ 3000 ಸಾವಿರ ರನ್ ದಾಖಲಿಸಿದ್ದ ಮೂರನೇ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ. ಕ್ರಿಸ್ ಗೇಲ್ 75 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ರೆ, ಕೆ.ಎಲ್. ರಾಹುಲ್ 80 ಇನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಗಡಿ ದಾಟಿದ್ದಾರೆ. ಫಾಫ್ ಡುಪ್ಲೆಸಸ್ ಮತ್ತು ಡೇವಿಡ್ ವಾರ್ನರ್ 94 ಇನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಪೂರೈಸಿದ್ದಾರೆ. IPL 2022- RCB – Faf du Plessis Crosses 3000 IPL Runs
ಮತ್ತೊಂದೆಡೆ ಐಪಿಎಲ್ ನಲ್ಲಿ ಮೂರು ಸಾವಿರ ರನ್ ದಾಖಲಿಸಿದ್ದ ದಕ್ಷಿಣ ಆಫ್ರಿಕಾದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಆರ್ ಸಿಬಿಯ ಸ್ಟಾರ್ ಆಟಗಾರ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಫಾಫ್ ಡುಪ್ಲೆಸಸ್ ಅವರು ಮೂರು ಸಾವಿರ ರನ್ ದಾಖಲಿಸಿದ್ದ 19ನೇ ಆಟಗಾರನಾಗಿದ್ದಾರೆ.
ಒಟ್ಟಿನಲ್ಲಿ ಫಾಫ್ ಡುಪ್ಲೆಸಸ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಸ್ಟಾರ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.