ಯಶಸ್ವಿ ಜೈಸ್ವಾಲ್(59) ಆಕರ್ಷಕ ಅರ್ಧಶತಕ ಹಾಗೂ ಆರ್. ಅಶ್ವಿನ್(40) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್, ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಪ್ಲೇ-ಆಫ್‌ಗೆ ಎಂಟ್ರಿಕೊಟ್ಟಿದೆ.
ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, 20 ಓವರ್‌ಗಳಲ್ಲಿ 150/6 ರನ್‌ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 19.4 ಓವರ್‌ಗಳಲ್ಲಿ 151/5 ರನ್‌ಗಳಿಸುವ ಮೂಲಕ ಗೆಲುವಿನ ನಗೆಬೀರಿತು. ಈ ಗೆಲುವಿನ ಮೂಲಕ ಸೀಸನ್‌ನಲ್ಲಿ 9ನೇ ಗೆಲುವು ಸಾಧಿಸಿದ ರಾಜಸ್ಥಾನ್ 18 ಪಾಯಿಂಟ್ಸ್ ಪಡೆದರು, ಉತ್ತಮ ರನ್‌ರೇಟ್ ಆಧಾರದಿಂದ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು.
ಮೊಯಿನ್ ಸ್ಪೋಟಕ ಆಟ:
ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಪರ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(2), ಡ್ವೇನ್ ಕಾನ್ವೆ(16) ತಂಡಕ್ಕೆ ಆಸರೆಯಾಗಲಿಲ್ಲ. ನಂತರ ಬಂದ ಜಗದೀಸನ್(1) ಹಾಗೂ ಅಂಬಟಿ ರಾಯುಡು(3) ಬಹುಬೇಗನೆ ನಿರ್ಗಮಿಸಿದರು. ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 93 ರನ್(57 ಬಾಲ್, 13 ಬೌಂಡರಿ, 3 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ್ ಬೌಲರ್‌ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಮೊಯಿನ್, 93 ರನ್‌ಗಳ ಅದ್ಭುತ ಮೊತ್ತ ಕಲೆಹಾಕಿದರು. ಇವರಿಗೆ ಸಾಥ್ ನೀಡಿದ ನಾಯಕ ಎಂ.ಎಸ್.ಧೋನಿ(26) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಸಿಎಸ್‌ಕೆ 20 ಓವರ್‌ಗಳಲ್ಲಿ 150 ರನ್‌ಗಳಿಸಲು ಸಾಧ್ಯವಾಯಿತು. ರಾಜಸ್ಥಾನ್ ಪರ ಚಹಲ್ ಹಾಗೂ ಮೆಕಾಯ್ ತಲಾ 2 ವಿಕೆಟ್ ಹಾಗೂ ಬೋಲ್ಟ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಜೈಸ್ವಾಲ್-ಅಶ್ವಿನ್ ಆಸರೆ:
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 151 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸಹ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ಜಾಸ್ ಬಟ್ಲರ್(2), ಸಂಜೂ ಸ್ಯಾಮ್ಸನ್(15), ದೇವದತ್ ಪಡಿಕ್ಕಲ್(3) ಹಾಗೂ ಹೆಟ್ಮಾಯೆರ್(6) ನಿರೀಕ್ಷಿತ ಆಟವಾಡಲಿಲ್ಲ. ಆದರೆ ಜವಾಬ್ದಾರಿಯ ಆಟವಾಡಿದ ಯಶಸ್ವಿ ಜೈಸ್ವಾಲ್ 59(44) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಆರ್. ಅಶ್ವಿನ್ ಉತ್ತಮ ಆಟವಾಡಿದರು. ಕೇವಲ 23 ಬಾಲ್‌ಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸ್ ಮೂಲಕ 40* ರನ್‌ಗಳಿಸಿದ ಅಶ್ವಿನ್, ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಸಿಎಸ್‌ಕೆ ಪರ ಪ್ರಶಾಂತ್ ಸೊಲಂಕಿ 2 ವಿಕೆಟ್ ಪಡೆದರೆ. ಸಿಮರ್ಜೀತ್, ಸ್ಯಾಂಟ್ನರ್ ಹಾಗೂ ಮೊಯಿನ್ ಅಲಿ ತಲಾ 1 ವಿಕೆಟ್ ಪಡೆದುಕೊಂಡರು. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ 10ನೇ ಸೋಲಿನೊಂದಿಗೆ 2022ರ ಐಪಿಎಲ್ ಪಯಣ ಮುಕ್ತಾಯಗೊಳಿಸಿತು.