ಕೊನೆವರೆಗೂ ಟ್ವಿಸ್ಟ್ ಅಂಡ್ ಟರ್ನ್ಗಳ ಮೂಲಕ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿ, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ರೋಚಕ ಹಣಾಹಣಿಯಲ್ಲಿ ʼಕಿಲ್ಲರ್ʼ ಇನ್ನಿಂಗ್ಸ್ ಆಡಿದ ಡೇವಿಡ್ ಮಿಲ್ಲರ್(94*) ಹಾಗೂ ನಿರ್ಣಾಯಕ ಹಂತದಲ್ಲಿ ಸ್ಪೋಟಕ ಆಟವಾಡಿದ ರಶೀದ್ ಖಾನ್(40) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡಕ್ಕೆ 3 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ಟರು.
ಪುಣೆಯ ಎಂಸಿಎ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 169/5 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಗುಜರಾತ್ ಟೈಟನ್ಸ್, ಡೇವಿಡ್ ಮಿಲ್ಲರ್ ಹಾಗೂ ರಶೀದ್ ಖಾನ್ ಅವರುಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 19.5 ಓವರ್ಗಳಲ್ಲಿ 170/7 ರನ್ಗಳಿಸುವ ಮೂಲಕ ಜಯಭೇರಿ ಬಾರಿಸಿತು. ಈ ಜಯದೊಂದಿಗೆ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಕಳೆದ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡಿದ್ದ ಚೆನ್ನೈ ಮತ್ತೊಮ್ಮೆ ಸೋಲಿನ ಆಘಾತ ಕಂಡಿತು.
ಮಿಲ್ಲರ್ ʼಕಿಲ್ಲರ್ʼ ಇನ್ನಿಂಗ್ಸ್:
ಚೇಸಿಂಗ್ ವೇಳೆ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಅನುಭವಿ ಡೇವಿಡ್ ಮಿಲ್ಲರ್ 94* ರನ್(51 ಬಾಲ್, 8 ಬೌಂಡರಿ, 6 ಸಿಕ್ಸ್) ಅದ್ಭುತ ಆಟವಾಡಿದರು. ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿದ್ದ ಸಿಎಸ್ಕೆ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಮಿಲ್ಲರ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆವರೆಗೂ ಕೆಚ್ಚೆದೆಯ ಆಟವಾಡಿದ ʼಕಿಲ್ಲರ್ʼ ಮಿಲ್ಲರ್, ಗುಜರಾತ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ದಿಕ್ಕು ಬದಲಿಸಿದ ರಶೀದ್:
ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ರಶೀದ್ ಖಾನ್ 40 ರನ್(21 ಬಾಲ್, 2 ಬೌಂಡರಿ, 3 ಸಿಕ್ಸ್) ಸ್ಪೋಟಕ ಆಟವಾಡಿದರು. ಕ್ರಿಸ್ ಜೋರ್ಡಾನ್ ಮಾಡಿದ 18ನೇ ಓವರ್ನಲ್ಲಿ 3 ಸಿಕ್ಸ್ ಹಾಗೂ 1 ಬೌಂಡರಿ ಸಹಿತ 23 ರನ್ಗಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಲ್ಲದೇ 6ನೇ ವಿಕೆಟ್ಗೆ ಮಿಲ್ಲರ್ ಹಾಗೂ ರಶೀದ್, 70 ರನ್ಗಳ ಅತ್ಯುತ್ತಮ ಜೊತೆಯಾಟವಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(3/23), ಮಹೀಶ್ ತೀಕ್ಷಣ(2/24) ಹಾಗೂ ಮುಖೇಶ್ ಚೌಧರಿ(1/18) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಗುಜರಾತ್ ಬ್ಯಾಟಿಂಗ್ ಆಘಾತ:
ಚೆನ್ನೈ ನೀಡಿದ 170 ರನ್ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್, ನೀರಸ ಆರಂಭ ಪಡೆಯಿತು. ಗುಜರಾತ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದ ಶುಭ್ಮನ್ ಗಿಲ್(0) ಮೊದಲ ಬಾಲ್ನಲ್ಲೇ ಔಟಾದರೆ. ವಿಜಯ್ ಶಂಕರ್(0) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇವರ ಬೆನ್ನಲ್ಲೇ ಅಭಿನವ್ ಮನೋಹರ್(12), ಮ್ಯಾಥ್ಯೂ ವೇಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ವೃದ್ಧಿಮಾನ್ ಸಾಹ(11) ಹಾಗೂ ರಾಹುಲ್ ತೆವಾಟಿಯಾ(6) ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ಗುಜರಾತ್ 87ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಗಾಯಕ್ವಾಡ್-ರಾಯುಡು ಆಸರೆ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ರಾಬಿನ್ ಉತ್ತಪ್ಪ(3) ಹಾಗೂ ಮೊಯಿನ್ ಅಲಿ(1) ಅವರನ್ನ ಬಹುಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಋತುರಾಜ್ ಗಾಯಕ್ವಾಡ್ 73 ರನ್ (48 ಬಾಲ್, 5 ಬೌಂಡರಿ, 5 ಸಿಕ್ಸ್) ಹಾಗೂ ಅಂಬಟಿ ರಾಯುಡು 46 ರನ್(31 ಬಾಲ್, 4 ಬೌಂಡರಿ, 2 ಸಿಕ್ಸ್) ಜವಾಬ್ದಾರಿಯುತ ಆಟವಾಡಿದರು. ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಇಬ್ಬರು 3ನೇ ವಿಕೆಟ್ಗೆ 92 ರನ್ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಕೊನೆ ಹಂತದಲ್ಲಿ ಶಿವಂ ದುಬೆ(19), ರವೀಂದ್ರ ಜಡೇಜಾ(22*) 5ನೇ ವಿಕೆಟ್ಗೆ 38 ರನ್ಗಳ ಜೊತೆಯಾಟದಿಂದ ತಂಡದ ಮೊತ್ತವನ್ನ 169ಕ್ಕೆ ಏರಿಸಿದರು. ಟೈಟನ್ಸ್ ಪರ ಅಲ್ಜರಿ ಜೋಸಫ್ 2, ಯಶ್ ದಯಾಳ್ ಹಾಗೂ ಶಮಿ ತಲಾ 1 ವಿಕೆಟ್ ಪಡೆದರು.