15ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಕಳೆದ ಪಂದ್ಯದಲ್ಲಿ ಎದುರಾದ ಸೋಲಿನ ಆಘಾತದಿಂದ ಕಮ್ಬ್ಯಾಕ್ ಮಾಡಲು ಸಜ್ಜಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು 2022ರ ಐಪಿಎಲ್ನ 26ನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಇಂದು ನಡೆಯುವ ಡಬಲ್ ಹೆಡರ್ ನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಹಣಾಹಣಿ ನಡೆಸಲಿವೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡು ತಂಡಗಳು ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದು, ಮುಂಬೈ ಈ ಪಂದ್ಯಕ್ಕೂ ಸಹ ತಂಡದಲ್ಲಿ ಬದಲಾವಣೆ ಮಾಡಿಕೊಂಡಿದೆ. ವೆಸ್ಟ್ ಇಂಡೀಸ್ ತಂಡದ ಫಾಬಿಯನ್ ಅಲೆನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಪ್ರಸಕ್ತ ಸೀಸನ್ನಲ್ಲಿ 5 ಪಂದ್ಯಗಳನ್ನ ಆಡಿರುವ ಲಕ್ನೋ ಸೂಪರ್ ಜೈಂಟ್ಸ್, 3 ಗೆಲುವು ಹಾಗೂ 2 ಸೋಲಿನೊಂದಿಗೆ 6 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಬಲಿಷ್ಠವಾಗಿರುವ ಲಕ್ನೋ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಲಕ್ನೋ ತಂಡದ ನಾಯಕ ಕೆ.ಎಲ್. ರಾಹುಲ್ ಅವರಿಗೆ ಇದು 100ನೇ ಐಪಿಎಲ್ ಪಂದ್ಯವಾಗಿದೆ.
ಆದರೆ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರು ಈ ಬಾರಿಯ ಐಪಿಎಲ್ನಲ್ಲಿ ಆಘಾತಕಾರಿ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್, ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲಿನ ಸಾಂಘಿಕ ಪ್ರದರ್ಶನದ ಕೊರತೆ ಎದುರಿಸುತ್ತಿರುವ ಮುಂಬೈ, ಟೂರ್ನಿಯಲ್ಲಿ ಆಡಿರುವ 5 ಪಂದ್ಯದಲ್ಲಿ ಐದು ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ತಂಡಗಳು:
*ಮುಂಬೈ ಇಂಡಿಯನ್ಸ್:*
ರೋಹಿತ್ ಶರ್ಮ(ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಕೈರನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರ, ಮುರುಗನ್ ಅಶ್ವಿನ್, ಫ್ಯಾಬಿಯನ್ ಅಲೆನ್, ಥೈಮಲ್ ಮಿಲ್ಸ್, ಜಯದೇವ್ ಉನಾದ್ಕಟ್.
*ಲಕ್ನೋ ಸೂಪರ್ ಜೈಂಟ್ಸ್:*
ಕೆ.ಎಲ್.ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ದೀಪಕ್ ಹೂಡ, ಮನೀಷ್ ಪಾಂಡೆ, ಜೇಸನ್ ಹೋಲ್ಡರ್, ಆಯುಷ್ ಬಡೋನಿ, ಮಾರ್ಕಸ್ ಸ್ಟಾಯ್ನಿಸ್, ಕೃನಾಲ್ ಪಾಂಡ್ಯ, ಆವೇಶ್ ಖಾನ್, ರವಿ ಬಿಷ್ಣೋಯಿ, ದುಶ್ಮಂತ ಚಮೀರ.
=================