ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿದೆ. ಅದರಂತೆ ಹೊಸ ಉತ್ಸಾಹದೊಂದಿಗೆ 2022ರ ಚುಟುಕು ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿರುವ ಪಂಜಾಬ್ ಕಿಂಗ್ಸ್, ತನ್ನ ನೂತನ ನಾಯಕನನ್ನು ಘೋಷಣೆ ಮಾಡಿದ್ದು, ಪ್ರಸಕ್ತ ಸೀಸನ್‌ನಲ್ಲಿ ಪಂಜಾಬ್ ತಂಡವನ್ನ ಮುನ್ನಡೆಸುವ ಅದೃಷ್ಟ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಒಲಿದು ಬಂದಿದೆ.
ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕನ್ನಡಿಗೆ ಕೆ.ಎಲ್.ರಾಹುಲ್ , ಪ್ರಸಕ್ತ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಸೇರ್ಪಡೆಯಾಗಿದ್ದಾರೆ. ಹೀಗಾಗಿ ತಂಡದ ನಾಯಕತ್ವ ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಎಳೆದಿರುವ ತಂಡದ ಮ್ಯಾನೇಜ್ಮೆಂಟ್, ಮಯಾಂಕ್ ಅಗರ್ವಾಲ್ ಅವರನ್ನ ಪಂಜಾಬ್ ಕಿಂಗ್ಸ್ ತಂಡದ ಹೊಸ ಕ್ಯಾಪ್ಟನ್ ಆಗಿ ಘೋಷಣೆ ಮಾಡಿದೆ. ಪಂಜಾಬ್ ಕಿಂಗ್ 2022ರ ಐಪಿಎಲ್ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು, 12 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
ನೂತನ ಕ್ಯಾಪ್ಟನ್ ಆಯ್ಕೆ ಬಳಿಕ ಮಾತನಾಡಿರುವ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ, 2018ರಿಂದಲೂ ಮಯಾಂಕ್ ಅಗರ್ವಾಲ್ ತಂಡದ ಭಾಗವಾಗಿದ್ದು, ಕಳೆದ ಎರಡು ವರ್ಷದಿಂದಲೂ ನಾಯಕತ್ವದ ಗುಂಪಿನಲ್ಲಿದ್ದಾರೆ. ಇತ್ತೀಚಿನ ಹರಾಜಿನಲ್ಲಿ ಆಯ್ಕೆ ಮಾಡಿರುವ ಆಟಗಾರರಲ್ಲಿ ಪ್ರತಿಭಾನ್ವಿತ ಮತ್ತು ಅನುಭವಿ ಆಟಗಾರರನ್ನು ಹೊಂದಿದ್ದೇವೆ. ಭವಿಷ್ಯದಲ್ಲಿ ಬಲಿಷ್ಠ ತಂಡವನ್ನು ರೂಪಿಸಲು ಮಯಾಂಕ್ ಅವರ ಜೊತೆಗೆ ಉತ್ತಮ ಅಡಿಪಾಯ ಹಾಕಬೇಕಿದೆ. ಮಯಂಕ್ ಅವರಲ್ಲಿ ನಾಯಕನಿಗೆ ಇರಬೇಕಾದ ಉತ್ಸಾಹ, ಪರಿಶ್ರಮ ಎಲ್ಲವೂ ಇದೆ. ಅವರ ನಾಯಕತ್ವದಲ್ಲಿ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದು, ಈ ಸೀಸನ್‌ನಲ್ಲಿ ಅವರು ತಂಡಕ್ಕೆ ತಂದುಕೊಡುತ್ತಾರೆಂದು ನಾನು ನಂಬಿದ್ದೇನೆ ಎಂದಿದ್ದಾರೆ.
ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಮಯಾಂಕ್ ಅಗರ್ವಾಲ್, 2018ರಿಂದ ನಾನು ಪಂಜಾಬ್ ತಂಡದಲ್ಲಿದ್ದು, ಅದ್ಭುತ ತಂಡವನ್ನು ಮುನ್ನಡೆಸಲು ನಾನು ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶ ನೀಡಿದ್ದು ನನಗೆ ಸಂತಸ ನೀಡಿದ್ದು, ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದು, ನನ್ನ ಕೆಲಸ ಸುಲಭವಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದ ಮಯಾಂಕ್, ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಡುವ ಗುರಿಯೊಂದಿಗೆ ಮುನ್ನಡೆಯುತ್ತೇವೆ ಎಂದು, ಕ್ಯಾಪ್ಟನ್ ಜವಾಬ್ದಾರಿ ನೀಡಿದ ತಂಡದ ಮ್ಯಾನೇಜ್ಮೆಂಟ್‌ಗೆ ಧನ್ಯವಾದ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಮೋಡಿ ಮಾಡಿರುವ ಕನ್ನಡಿಗೆ ಮಯಾಂಕ್ ಅಗರ್ವಾಲ್, ಈವರೆಗೂ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ್ದು, ಒಂದು ಸೆಂಚುರಿ ಹಾಗೂ 11 ಹಾಫ್ ಸೆಂಚುರಿ ಸಹಿತ 23.46ರ ಸರಾಸರಿಯಲ್ಲಿ 1573 ರನ್‌ಗಳನ್ನ ಗಳಿಸಿದ್ದಾರೆ.