IPL 2022- DC -KKR – ಡೆಲ್ಲಿ ಕ್ಯಾಪಿಟಲ್ಸ್ Vs ಕೆಕೆಆರ್ ಕಾದಾಟ.. ಗೆಲ್ಲೋರು ಯಾರು ?
15ನೇ ಐಪಿಎಲ್ ಟೂರ್ನಿಯ 41ನೇ ಪಂದ್ಯ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳು ಮುಂಬೈ ನ ವಾಂಖೇಡೆ ಅಂಗಣದಲ್ಲಿ ಏಪ್ರಿಲ್ 28ರಂದು ಕಾದಾಟ ನಡೆಸಲಿವೆ.
ಹಾಗೇ ನೋಡಿದ್ರೆ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಸದ್ಯ ಸ್ಥಿತಿ ಒಂದೇ ರೀತಿಯಲ್ಲಿದೆ. ಎರಡೂ ತಂಡಗಳು ಏಳು ಪಂದ್ಯಗಳನ್ನು ಆಡಿವೆ. ಮೂರು ಪಂದ್ಯಗಳಲ್ಲಿ ಜಯ ಗಳಿಸಿದ್ರೆ, ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿವೆ. ಆದ್ರೆ ರನ್ ರೇಟ್ ಆಧಾರದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಹೆಜ್ಜೆ ಮುಂದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಳನೇ ಸ್ಥಾನದಲ್ಲಿದ್ರೆ, ಕೆಕೆಆರ್ ತಂಡ ಎಂಟನೇ ಸ್ಥಾನದಲ್ಲಿದೆ. IPL 2022: Match 41, DC vs KKR Match Prediction – Who will win
ಇನ್ನೊಂದೆಡೆ, ಎರಡು ತಂಡಗಳು ಸಂಘಟಿತ ಆಟವನ್ನಾಡಲು ವಿಫಲವಾಗುತ್ತಿವೆ. ಕೆಕೆಆರ್ ತಂಡಕ್ಕಂತೂ ಉತ್ತಮ ಆರಂಭ ಸಿಗುತ್ತಿಲ್ಲ. ವೆಂಕಟೇಶ್ ಅಯ್ಯರ್ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯಕ್ಕೆ ಅಜಿಂಕ್ಯಾ ರಹಾನೆ ಮತ್ತು ಸುನೀಲ್ ನರೇನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ನಾಯಕ ಶ್ರೇಯಸ್ ಅಯ್ಯರ್ ಕೂಡ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಬೇಕಿದೆ. ಹಾಗೇ ನಿತೇಶ್ ರಾಣ ಸ್ಯಾಮ್ ಬಿಲ್ಲಿಂಗ್ಸ್, ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬೇಕಿದೆ. ಬೌಲಿಂಗ್ ನಲ್ಲೂ ಪ್ಯಾಟ್ ಕಮಿನ್ಸ್ ಬದಲು ಟೀಮ್ ಸೌಥಿ 11ರ ಬಳಗದಲ್ಲಿ ಕಾಣಿಸಿಕೊಂಡ್ರೂ ಅಚ್ಚರಿ ಏನಿಲ್ಲ. ಶಿವಮ್ ಮಾವಿ ಮತ್ತು ಉಮೇಶ್ ಯಾದವ್, ಸ್ಪಿನ್ನರ್ ವರುಣ್ ಚಕ್ರವರ್ತಿ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಒಟ್ಟಿನಲ್ಲಿ ಕೆಕೆಆರ್ ತಂಡ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಗೆಲುವಿನ ಲಯ ಕಂಡುಕೊಳ್ಳಲು ಹೋರಾಟ ನಡೆಸಬೇಕಿದೆ.
ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರ ಸಮಸ್ಯೆ ಇಲ್ಲ. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅಪಾಯಕಾರಿ ಎಂಬುದು ಗೊತ್ತಿರುವ ವಿಚಾರವೇ. ಅದರಲ್ಲೂ ಡೇವಿಡ್ ವಾರ್ನರ್ ಸ್ಥಿರ ಪ್ರದರ್ಶನ ನೀಡುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಇದೆ. ಸಫ್ರಝ್ ಖಾನ್ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಯಶ್ ಧೂಲ್ ಅವರಿಗೆ ಅವಕಾಶ ನೀಡಬೇಕು. ರಿಷಬ್ ಪಂತ್ ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಆಡಬೇಕಿದೆ. ರೊವ್ಮನ್ ಪೊವೆಲ್ ಫಾರ್ಮ್ ಕಂಡುಕೊಂಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಇನ್ನು ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಕೆಳ ಕ್ರಮಾಂಕದಲ್ಲಿ ಆಧಾರವಾಗಬೇಕಿದೆ. ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ದುಬಾರಿಯಾದ್ರೂ ತಂಡದ ಟ್ರಂಪ್ ಕಾರ್ಡ್ ಬೌಲರ್. ಮುಷ್ತಾಫಿಝುರ್ ರಹಮಾನ್ ಜೊತೆ ಮಿಟ್ಚೆಲ್ ಮಾರ್ಶ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇದ್ರಿಂದ ಖಲೀಲ್ ಅಹಮ್ಮದ್ ಹೊರಗುಳಿಯಬೇಕಾಗುತ್ತದೆ.
ಒಟ್ಟಿನಲ್ಲಿ ಮುಂಬೈನ ವಾಂಖೇಡೆ ಅಂಗಣದಲ್ಲಿ ಹಳೆಯ ದೊಸ್ತಿ ಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.