ಐಪಿಎಲ್ ಚುಟುಕು ಕ್ರಿಕೆಟ್ ಪಂದ್ಯವನ್ನ ಕಣ್ತುಂಬಿಕೊಳ್ಳುವ ತವಕದಲ್ಲಿರುವ ಅಭಿಮಾನಿಗಳಿಗೆ ಮಹಾರಾಷ್ಟ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಎರಡು ಡೋಸ್ ಕೋವಿಡ್-19 ವ್ಯಾಕ್ಸಿನ್ ಪಡೆದಿರುವ ಶೇ.25 ಮಂದಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಆದರೆ ಎರಡು ಡೋಸ್ ಕೋವಿಡ್-19 ವ್ಯಾಕ್ಸಿನ್ ಪಡೆದಿರುವ ಶೇ.25 ಪ್ರೇಕ್ಷಕರಿಗೆ ಮಾತ್ರ ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಐಪಿಎಲ್ ಪಂದ್ಯಾವಳಿಯನ್ನು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ, ಬಿಸಿಸಿಐ ಹಾಗೂ ಐಪಿಎಲ್ ಪ್ರಮುಖರೊಂದಿಗೆ ಸಭೆ ನಡೆಸಿತು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಆದಿತ್ಯ ಠಾಕ್ರೆ, ಏಕ್ನಾಥ್ ಶಿಂಧೆ ಸಭೆಯಲ್ಲಿ ಪಾಲ್ಗೊಂಡಿದ್ದರೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವಿಜಯ್ ಪಾಟಿಲ್ ಹಾಗೂ ಸಮಿತಿ ಸದಸ್ಯರಾದ ಅಜಿಂಕ್ಯಾ ನಾಯಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಐಪಿಎಲ್ 2022ರ ಎಲ್ಲಾ ಪಂದ್ಯಗಳು ಈ ಬಾರಿ ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮೈದಾನದಲ್ಲಿ ತಲಾ 20 ಪಂದ್ಯ ಹಾಗೂ ಡಿವೈ ಪಾಟಿಲ್ ಸ್ಟೇಡಿಯಂ ಹಾಗೂ ಪುಣೆ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಈ ಬಾರಿಯ ಐಪಿಎಲ್ ಪಂದ್ಯಾವಳಿ ಮಾರ್ಚ್ 26ರಿಂದ ಆರಂಭವಾಗಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.