ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಶ್ರೇಯಸ್ ಅಯ್ಯರ್, ಬ್ರೆಂಡನ್ ಮೆಕಲಮ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳುವ ಜೊತೆಗೆ, ಮೆಕ್ಕಲಮ್ ‘ಅಗ್ರೆಸ್ಸಿವ್ ಕೋಚ್’ ಎಂದಿದ್ದಾರೆ.
ಕೆಕೆಆರ್ ಫ್ರಾಂಚೈಸಿ ಸಂದರ್ಶನದಲ್ಲಿ ಮಾತನಾಡಿದ ಅವರು, ಕೆಕೆಆರ್ ಕುಟುಂಬದ ಭಾಗವಾಗಿರುವುದಕ್ಕೆ ನನಗೆ ಅಗಾಧ ಸಂತೋಷವಿದೆ. ತಂಡಕ್ಕಾಗಿ ಈ ಹಿಂದೆ ಶ್ರೇಷ್ಠ ಆಟಗಾರರು ಮಾಡಿದ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ಅಲ್ಲದೇ ಕೆಕೆಆರ್ ತಂಡಕ್ಕಾಗಿ ಅವರು ರಚಿಸಿರುವ ಹಾದಿಯಲ್ಲೇ ನಾನು ಸಹ ಮುನ್ನಡೆಯಲು ಬಯಸುತ್ತೆನೆ ಎಂದಿದ್ದಾರೆ.
ನನ್ನ ಪ್ರಕಾರ ಬ್ರೆಂಡನ್ ಮೆಕ್ಕಲಮ್ ಅವರು ಅಗ್ರೆಸ್ಸಿವ್ ಕೋಚ್ ಆಗಿದ್ದು, ನ್ಯೂಜಿ಼ಲೆಂಡ್ ಪರ ಅವರು ಆಡುವುದನ್ನು ನೀವು ನೋಡಿದ್ದೀರಾ. ಅತ್ಯಂಕ ಆಕ್ರಮಣಕಾರಿ ಮನಸ್ಥಿತಿ ಹೊಂದಿರುವ ಅವರು ಯಾವುದೇ ರಿಸ್ಕ್ ತಗೆದುಕೊಳ್ಳಲು ಹಿಂಜರಿಯುವುದಿಲ್ಲ. ನಾನು ಕೂಡ ಇದನ್ನು ಇಷ್ಟಪಡುತ್ತೇನೆ ಎಂದಿರುವ ಶ್ರೇಯಸ್ ಅಯ್ಯರ್, ಐಪಿಎಲ್ ಹರಾಜಿನ ನಂತರ ನಾನು ಮೆಕ್ಕಲಮ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಖಂಡಿತವಾಗಿ ನಾನು ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದು, ಪ್ರಸಕ್ತ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಪಡೆಯುವ ಸಲುವಾಗಿ ಕೆಕೆಆರ್ ಫ್ರಾಂಚೈಸಿ ಭಾರೀ ಕಸರತ್ತು ನಡೆಸಿತ್ತು. ಹಲವು ಫ್ರಾಂಚೈಸಿಗಳ ನಡುವಿನ ತೀವ್ರ ಪೈಪೋಟಿ ನಡುವೆಯೂ ಕೊಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್ ಅಯ್ಯರ್ ಅವರನ್ನು 12.5 ಕೋಟಿ ರೂ.ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಪ್ರಸಕ್ತ ಆವೃತ್ತಿಗೆ ಶ್ರೇಯಸ್ ಅಯ್ಯರ್ ಅವರನ್ನ ಕೆಕೆಆರ್ ತಂಡದ ಕ್ಯಾಪ್ಟನ್ ಆಗಿಯೂ ನೇಮಿಸಿದೆ. 2022ರ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿರುವ ಶ್ರೇಯಸ್ ಅಯ್ಯರ್, ಎರಡು ಬಾರಿಯ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಐಪಿಎಲ್ ಪ್ರಶಸ್ತಿ ಗೆದ್ದುಕೊಡುವ ನಿರೀಕ್ಷೆಯಲ್ಲಿದ್ದಾರೆ.