ನಾಯಕ ಕೆ.ಎಲ್.ರಾಹುಲ್(103*) ಶತಕದ ಅಬ್ಬರದ ನಡುವೆಯೂ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ 168 ರನ್ ಕಲೆಹಾಕಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ಗಳಿಸಿತು. ಲಕ್ನೋ ಪರ ರಾಹುಲ್(103*), ಮನೀಷ್ ಪಾಂಡೆ(22) ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ನಿಲ್ಲದ ರಾಹುಲ್ ಪ್ರಾಬಲ್ಯ:
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆ.ಎಲ್.ರಾಹುಲ್ 103* ರನ್(62 ಬಾಲ್, 12 ಬೌಂಡರಿ, 4 ಸಿಕ್ಸ್) ಅದ್ಭುತ ಬ್ಯಾಟಿಂಗ್ನಿಂದ ಆಸರೆಯಾದರು. ಜವಾಬ್ದಾರಿಯುತ ಆಟವಾಡಿದ ರಾಹುಲ್, ಮುಂಬೈ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ರಾಹುಲ್, ತಂಡದ ಮೊತ್ತವನ್ನ ಹೆಚ್ಚಿಸಿದರು. ಅಲ್ಲದೇ ಪ್ರಸಕ್ತ ಐಪಿಎಲ್ನಲ್ಲಿ 2ನೇ ಹಾಗೂ ಐಪಿಎಲ್ ವೃತ್ತಿ ಬದುಕಿನ 4ನೇ ಶತಕ ಬಾರಿಸಿ ಮಿಂಚಿದರು.
ಬ್ಯಾಟ್ಸ್ಮನ್ಗಳ ವೈಫಲ್ಯ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ರಮುಖ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ತಂಡದ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(10) ಬಹುಬೇಗನೆ ನಿರ್ಗಮಿಸಿದರೆ. ಕನ್ನಡಿಗ ಮನೀಷ್ ಪಾಂಡೆ(22) ಉತ್ತಮವಾಗಿ ಆಡಿದರು, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಮಾರ್ಕಸ್ ಸ್ಟಾಯ್ನಿಸ್(0), ಕೃನಾಲ್ ಪಾಂಡ್ಯ(1) ಹಾಗೂ ದೀಪಕ್ ಹೂಡ(10) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೊನೆಯಲ್ಲಿ ಬಂದ ಆಯುಷ್ ಬಡೋನಿ(14) ರನ್ಗಳಿಸಿದರು.
ಮುಂಬೈ ಬಿಗು ಬೌಲಿಂಗ್:
ಕೆ.ಎಲ್.ರಾಹುಲ್ ಅಬ್ಬರದ ನಡುವೆಯೂ ಮುಂಬೈ ಬೌಲರ್ಗಳು ಲಕ್ನೋ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಬೌಲರ್ಗಳು, ಎದುರಾಳಿ ಬ್ಯಾಟ್ಸ್ಮನ್ಗಳ ರನ್ಗಳಿಕೆ ಓಟಕ್ಕೆ ಕಡಿವಾಣ ಹಾಕಿದರು. ಮುಂಬೈ ಪರ ಕೈರನ್ ಪೊಲಾರ್ಡ್(2/8), ರೈಲಿ ಮೆರಿಡಿತ್(2/40), ಜಸ್ಪ್ರೀತ್ ಬುಮ್ರ(1/31) ಹಾಗೂ ಡೆನಿಯಲ್ ಸ್ಯಾಮ್ಸ್(1/40) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.