ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಅಬ್ಬರಿಸಿರುವ ಕನ್ನಡಿಗ ಕೆ.ಎಲ್.ರಾಹುಲ್, ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮದೇ ಪರಾಕ್ರಮ ಹೊಂದಿದ್ದಾರೆ. ಪ್ರತಿ ಸೀಸನ್ನಲ್ಲೂ ಚಾಂಪಿಯನ್ ತಂಡದ ವಿರುದ್ಧ ಅಬ್ಬರದ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್, 2022ರ ಆವೃತ್ತಿಯಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ನಲ್ಲಿ ಮಿಂಚುತ್ತಿರುವ ಕೆ.ಎಲ್.ರಾಹುಲ್, ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 2022ರ ಐಪಿಎಲ್ನಲ್ಲಿ ಬ್ರಬೋರ್ನ್ನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ 103*(60) ಶತಕ ಬಾರಿಸಿ ಮಿಂಚಿದ್ದರು. ವಾಂಖೆಡೆಯಲ್ಲಿ ನಡೆದ 2ನೇ ಹಣಾಹಣಿಯಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದ ರಾಹುಲ್, 130*(60) ಮತ್ತೊಂದು ಸೆಂಚುರಿ ಬಾರಿಸಿ ಘರ್ಜಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ 3ನೇ ಶತಕ ಗಳಿಸಿದ ಕೆ.ಎಲ್.ರಾಹುಲ್, ಐಪಿಎಲ್ನಲ್ಲಿ ಒಂದೇ ತಂಡದ ಪರ ಹೆಚ್ಚು ಶತಕ(3) ಬಾರಿಸಿದ ಮೊದಲ ಆಟಗಾರ ಎನಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧ ಈವರೆಗೂ 16 ಇನ್ನಿಂಗ್ಸ್ಗಳಲ್ಲಿ 86.70 ಸರಾಸರಿ ಹಾಗೂ 135.89ರ ಸ್ಟ್ರೈಕ್ ರೇಟ್ನಲ್ಲಿ 867 ರನ್ಗಳಿಸಿರುವ ಕೆ.ಎಲ್.ರಾಹುಲ್, ಮೂರು ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿ ಐದು ಬಾರಿಯ ಚಾಂಪಿಯನ್ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಹೊಂದಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ಹೆಚ್ಚು ಶತಕಗಳಿಸಿರುವ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಒಟ್ಟು 4 ಶತಕಗಳಿಸಿರುವ ರಾಹುಲ್, 3ನೇ ಸ್ಥಾನಕ್ಕೇರಿದ್ದಾರೆ.
ಕೆ.ಎಲ್.ರಾಹುಲ್ v ಮುಂಬೈ ಇಂಡಿಯನ್ಸ್
ಇನ್ನಿಂಗ್ಸ್ – 16
ರನ್ಗಳು – 867
ಸರಾಸರಿ – 86.70
ಸ್ಟ್ರೈಕ್ ರೇಟ್ – 135.89
50/100 – 5/3
ಕೆ.ಎಲ್.ರಾಹುಲ್ – IPL 2022ಯಲ್ಲಿ
ಇನ್ನಿಂಗ್ಸ್ – 8
ರನ್ಗಳು – 368
ಸರಾಸರಿ – 61.33
ಸ್ಟ್ರೈಕ್ ರೇಟ್ – 147.79
50/100 – 1/2