ಐಪಿಎಲ್ 2022 – ಕೆ.ಎಲ್. ರಾಹುಲ್ ಲಕ್ನೋ ತಂಡದ ಸಾರಥಿ ?
15ನೇ ಆವೃತ್ತಿಯ ಐಪಿಎಲ್ ನಲ್ಲಿ ಲಕ್ನೋ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ನಾಯಕನಾಗುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಲಕ್ನೋ ಫ್ರಾಂಚೈಸಿಯ ಮೂಲಗಳ ಪ್ರಕಾರ ಕೆ.ಎಲ್. ರಾಹುಲ್ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ಸ್ಪಿನ್ನರ್ ರವಿ ಬಿಸ್ನೋಯ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಅವರು ಆಟಗಾರರಾಗಿ ಲಕ್ನೋ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಕೆ.ಎಲ್. ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಕೆ.ಎಲ್. ರಾಹುಲ್ ರನ್ ಮಳೆಯನ್ನೇ ಸುರಿಸಿದ್ದರು. ಆದ್ರೆ ತಂಡಕ್ಕೆ ಗೆಲುವು ಒದಗಿಸಿಕೊಡುವಲ್ಲಿ ವಿಫಲರಾಗಿದ್ದರು.
ಈ ನಡುವೆ, ಪಂಜಾಬ್ ಕಿಂಗ್ಸ್ ತಂಡ ಕೆ.ಎಲ್. ರಾಹುಲ್ ಅವರನ್ನು ಈ ಬಾರಿಯ ಟೂರ್ನಿಗೆ ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಲಕ್ನೋ ತಂಡ ಕೆ.ಎಲ್. ರಾಹುಲ್ ಅವರಿಗೆ ಬಲೆ ಬೀಸಿತ್ತು.
ಹಾಗೇ ರವಿ ಬಿಷ್ಣೋಯ್ ಅವರು ಕಿಂಗ್ಸ್ ಪಂಜಾಬ್ ತಂಡದ ಪರ ಆಡಿದ್ರೆ, ಮಾರ್ಕಸ್ ಸ್ಟೋನಿಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದರು.
15ನೇ ಆವೃತ್ತಿಯ ಐಪಿಎಲ್ ನಲ್ಲಿ ಒಟ್ಟು ಹತ್ತು ತಂಡಗಳು ಆಡಲಿವೆ. ಆರ್ ಪಿಎಸ್ ಜಿ ಗ್ರೂಪ್ ಲಕ್ನೋ ಫ್ರಾಂಚೈಸಿಯನ್ನು 7090 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಹಾಗೇ ಅಹಮದಾಬಾದ್ ತಂಡ ಕೂಡ ಸೇರ್ಪಡೆಗೊಂಡಿದೆ.
ಇನ್ನು 2016 ಮತ್ತು 2017ರ ಐಪಿಎಲ್ ನಲ್ಲಿ ಆರ್ ಪಿಎಸ್ ಜಿ ಗ್ರೂಪ್ ಪುಣೆ ಪೂಪರ್ ಜಿಯಂಟ್ ತಂಡವನ್ನು ಖರೀದಿ ಮಾಡಿತ್ತು. ಆರ್ ಪಿಎಸ್ ಜಿ ಗ್ರೂಪ್ ಕೊಲ್ಕತ್ತಾ ಮೂಲದ ಕಂಪೆನಿಯಾಗಿದೆ.
ಇನ್ನೊಂದೆಡೆ ಕೆ.ಎಲ್. ರಾಹುಲ್ ಮೇಲೆ ಈ ಬಾರಿಯ ಐಪಿಎಲ್ ನಲ್ಲಿ ಭಾರೀ ನಿರೀಕ್ಷೆಗಳು ಕೂಡ ಇವೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಕೆ.ಎಲ್. ರಾಹುಲ್ ಅವರು ಭವಿಷ್ಯದ ಟೀಮ್ ಇಂಡಿಯಾದ ನಾಯಕ ಅಂತನೇ ಬಿಂಬಿಸಲಾಗುತ್ತಿದೆ. ಹೀಗಾಗಿ ಕೆ.ಎಲ್. ರಾಹುಲ್ ಅವರಿಗೆ ಬಹಳ ಬೇಡಿಕೆ ಕೂಡ ಇದೆ.
ಒಟ್ಟಿನಲ್ಲಿ ಲಕ್ನೋ ತಂಡದ ನಾಯಕನಾಗಿ ಕೆ.ಎಲ್. ರಾಹುಲ್ ಯಶಸ್ವಿಯಾಗಿ ಮತ್ತೆ ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ ಗೂ ನಾಯಕನಾಗುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.