IPL 2022- Dinesh Karthik – ಆರ್ ಸಿಬಿಯ ಮ್ಯಾಚ್ ಫಿನಿಶರ್ ಡಿಕೆ ಸಾಹೇಬ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡ್ತಾರಾ ..!
ದಿನೇಶ್ ಕಾರ್ತಿಕ್.. 37ರ ಹರೆಯ. ಆಲ್ ಮೋಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕಿತ್ತು. ಆದ್ರೆ ದಿನೇಶ್ ಕಾರ್ತಿಕ್ ಗುರಿ ಮತ್ತು ಉದೇಶನೇ ಬೇರೆ ಇದೆ. ಅದಕ್ಕಾಗಿ ಅವರು ಏನು ಮಾಡಲು ಕೂಡ ರೆಡಿಯಾಗಿದ್ದಾರೆ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ ಅನ್ನೋ ನಂಬಿಕೆ ಮತ್ತು ವಿಶ್ವಾಸ ಅವರಲ್ಲಿದೆ.
ಹೌದು, ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದಿಂದ ದೂರ ಉಳಿದು ಮೂರು ವರ್ಷಗಳು ಕಳೆದವು. 2019ರಿಂದ ದಿನೇಶ್ ಕಾರ್ತಿಕ್ ಕೇವಲ ಐಪಿಎಲ್ ಮತ್ತು ದೇಸಿ ಕ್ರಿಕೆಟ್ ಗೆ ಸೀಮಿತವಾಗಿದ್ರು. 2004ರಿಂದ ಟೀಮ್ ಇಂಡಿಯಾಗೆ ಬಂದು ಹೋಗುವ ಆತಿಥಿಯಾಗಿದ್ದ ದಿನೇಶ್ ಕಾರ್ತಿಕ್ ಗೆ ಧೋನಿಯೇ ಅಡ್ಡಗಾಲು ಆಗಿದ್ದರು.
ಹೀಗಿದ್ರೂ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಪರ ಆಡಿ ಹಲವು ರೋಚಕ ಗೆಲುವುಗಳನ್ನು ತಂದುಕೊಟ್ಟಿದ್ದರು. ದಿನೇಶ್ ಕಾರ್ತಿಕ್ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಡಿಕೆ ಅಂತನೇ ಫೇಮಸ್ ಆಗಿದ್ದರು.
ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ದಿನೇಶ್ ಕಾರ್ತಿಕ್ ಎಂದಿಗೂ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ತನ್ನ ಸಾಮಥ್ರ್ಯದ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿದ್ದ ಡಿಕೆಗೆ ಎಂದಿಗೂ ನನ್ನತನವನ್ನು ಕಳೆದುಕೊಳ್ಳಲಿಲ್ಲ. ಪತ್ನಿಯನ್ನು ಗೆಳೆಯ ಮುರಳಿ ವಿಜಯ್ ಮದುವೆಯಾದಾಗ ದಿನೇಶ್ ಕಾರ್ತೀಕ್ ಸಾಕಷ್ಟು ಖಿನ್ನತೆಗೂ ಒಳಗಾಗಿದ್ದರು. ಆದ್ರೂ ಧೈರ್ಯ ಕಳೆದುಕೊಳ್ಳಲಿಲ್ಲ. ವೈಯಕ್ತಿಕ ಬದುಕಿನ ಎರಡನೇ ಇನಿಂಗ್ಸ್ ನಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಎಂಟ್ರಿಕೊಟ್ಟ ನಂತರ ದಿನೇಶ್ ಕಾರ್ತಿಕ್ ಬದುಕಿಗೂ ಹೊಸ ತಿರುವನ್ನು ನೀಡಿತ್ತು.
ಇನ್ನು ಟೀಮ್ ಇಂಡಿಯಾದಿಂದ ದೂರವಾದ ಬಳಿಕ ದಿನೇಶ್ ಕಾರ್ತಿಕ್ ತನ್ನ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅಂತ ಅಂದುಕೊಂಡಿದ್ದರು. ಅದಕ್ಕಾಗಿ ಕೆಲವೊಂದು ಬಾರಿ ವಿಶ್ಲೇಷಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಆದ್ರೆ ತನಗೆ ಬದುಕುಕಟ್ಟಿಕೊಟ್ಟ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ದೇಸಿ ಮತ್ತು ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ದಿನೇಶ್ ಕಾರ್ತಿಕ್ ಕೆಕೆಆರ್ ತಂಡದ ಸಾರಥಿಯೂ ಆಗಿದ್ದರು. ಆದ್ರೆ ನಾಯಕನಾಗಿ ದಿನೇಶ್ ಕಾರ್ತಿಕ್ ಯಶ ಸಾಧಿಸಲಿಲ್ಲ. ಹೀಗಾಗಿ ನಾಯಕತ್ವವನ್ನು ತ್ಯಜಿಸಿದ್ದರು.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆರ್ ಸಿಬಿ ಖರೀದಿ ಮಾಡಿದಾಗ ಅನೇಕರು ಟೀಕೆ ಕೂಡ ಮಾಡಿದ್ದರು. ದಿನೇಶ್ ಕಾರ್ತಿಕ್ ಏನು ಮಾಡ್ತಾರೆ ? ನಾಯಕತ್ವವನ್ನೇ ಬಿಟ್ಟುಕೊಟ್ಟ ಆಟಗಾರನಿಂದ ಆರ್ ಸಿಬಿಗೆ ಏನು ಲಾಭ ಎಂದು ಟೀಕೆ ಕೂಡ ಮಾಡಿದ್ದರು.
ಆದ್ರೆ ದಿನೇಶ್ ಕಾರ್ತಿಕ್ ಎಲ್ಲ ಟೀಕೆ ಮತ್ತು ಅವಮಾನಗಳಿಗೆ ಉತ್ತರ ಕೊಡುತ್ತಿದ್ದಾರೆ. ಆರ್ ಸಿಬಿ ತಂಡದ ಹೆಡ್ ಕೋಚ್ ಸಂಜಯ್ ಬಂಗಾರ್ ಗೆ ಕೊಟ್ಟ ಮಾತಿನಂತೆ ದಿನೇಶ್ ಕಾರ್ತಿಕ್ ಆಡುತ್ತಿದ್ದಾರೆ.
ಆರ್ ಸಿಬಿ ತಂಡವನ್ನು ಸೇರಿಕೊಂಡ ನಂತರ ದಿನೇಶ್ ಕಾರ್ತಿಕ್ ಜೊತೆ ಸಂಜಯ್ ಬಂಗಾರ್ ಮಾತುಕತೆ ನಡೆಸಿದ್ದರು. ತಂಡದಲ್ಲಿ ಎಬಿಡಿ ಇಲ್ಲ. ಎಬಿಡಿ ಸ್ಥಾನವನ್ನು ತುಂಬುವಂತಹ ಆಟಗಾರನೂ ಇಲ್ಲ. ಅದು ಸಾಧ್ಯವಿಲ್ಲ. ಆದ್ರೆ ಆರ್ ಸಿಬಿ ತಂಡದ ಮ್ಯಾಚ್ ಫೀನಿಶರ್ ಜವಾಬ್ದಾರಿಯನ್ನು ನೀನು ನಿಭಾಯಿಸಬೇಕು ಎಂದು ಸಂಜಯ್ ಬಂಗಾರ್, ದಿನೇಶ್ ಕಾರ್ತಿಕ್ ಗೆ ಹೇಳಿದ್ದರು.
ಆರ್ ಸಿಬಿ ಕೋಚ್ ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಬಾರದು. ತನ್ನ ಮೇಲೆ ನಂಬಿಕೆ ಇಟ್ಟ ತಂಡಕ್ಕೆ ಹಿನ್ನಡೆಯಾಗಬಾರದು ಅನ್ನೋ ದೃಷ್ಟಿಯಲ್ಲೇ ಡಿಕೆ ಬ್ಯಾಟ್ ಬೀಸಿದ್ದರು. ಮೊದಲ ಪಂದ್ಯದಲ್ಲಿ ಅಜೇಯ 32 ರನ್, ನಂತರ ಅಜೇಯ 14, ಬಳಿಕ ಅಜೇಯ 44 ಮತ್ತು ಅಜೇಯ 7 ರನ್ ಗಳಿಸಿದ್ದ ಡಿಕೆ, ಐದನೇ ಪಂದ್ಯದಲ್ಲಿ 34 ರನ್ ಗಳಿಸಿ ಔಟಾಗಿದ್ದರು. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 66 ರನ್ ಸಿಡಿಸಿದ್ದ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಅವರ ಮ್ಯಾಚ್ ಫಿನಿಶಿಂಗ್ ಆಟಕ್ಕೆ ಆರ್ ಸಿಬಿ ನಾಯಕ ಫಾಫ್ ಡುಪ್ಲೇಸಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸಲಾಂ ಅನ್ನುತ್ತಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದ ಆಯ್ಕೆ ಸಮಿತಿಗೂ ತಲೆನೋವಾಗುವಂತೆ ಬ್ಯಾಟ್ ಬೀಸುತ್ತಿದ್ದಾರೆ ದಿನೇಶ್ ಕಾರ್ತಿಕ್
ಹೌದು, ನೀವು ನಂಬುವುದಾದ್ರೆ ನಂಬಿ. ಬಿಟ್ರೆ ಬಿಡಿ. ನನ್ನ ಗುರಿ ಮತ್ತು ಉದ್ದೇಶ ಬೇರೆ ಇದೆ. ನಾನು ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಬೇಕು. ನನ್ನ ದೇಶಕ್ಕೆ ಏನಾದ್ರೂ ಕೊಡುಗೆ ನೀಡಬೇಕು. ಐಪಿಎಲ್ ಟೂರ್ನಿಯ ಆಟ ನನ್ನ ಗುರಿ ಮತ್ತು ಉದ್ದೇಶವನ್ನು ಈಡೇರಿಸಲು ಸಿಕ್ಕಿರುವ ವೇದಿಕೆ. ಇದಕ್ಕಾಗಿ ನಾನು ತುಂಬಾನೇ ಕಷ್ಟಪಡುತ್ತಿದ್ದೇನೆ. ನಾನು ಅಂದುಕೊಂಡಿದ್ದ ಉದ್ದೇಶ ಮತ್ತು ಗುರಿಯನ್ನು ಮುಟ್ಟುತ್ತೇನೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳ್ತಾರೆ ದಿನೇಶ್ ಕಾರ್ತಿಕ್.
ಒಟ್ಟಿನಲ್ಲಿ ದಿನೇಶ್ ಕಾರ್ತಿಕ್ ಆರ್ ಸಿಬಿಯ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದಾರೆ. ದಿನೇಶ್ ಕಾರ್ತಿಕ್ ಬರೀ ಡಿಕೆಯಲ್ಲ.. ಆರ್ ಸಿಬಿಯ ರನ್ ಸಾಹೇಬ ಕೂಡ ಹೌದು..!