ಐಪಿಎಲ್ ಮಹಾಸಮರದಲ್ಲಿ ಬೌಂಡರಿ, ಸಿಕ್ಸರ್‌ಗಳನ್ನೇ ಸಿಡಿಸುವ ಬ್ಯಾಟ್ಸ್‌ಮನ್‌ಗಳಿಗೆ ಬ್ರೇಕ್ ಹಾಕೋದು ಬೌಲರ್‌ಗಳಿಗೆ ಸವಾಲಿನ ಸಂಗತಿ. ಅದರಲ್ಲೂ ಮೇಡನ್ ಓವರ್ ಪಡೆಯೋದು ಸುಲಭವಂತೂ ಅಲ್ಲ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ʼಸ್ಲೋ ಬಾಲ್ʼ ಸ್ಪೆಷಲಿಷ್ಟ್ ಹರ್ಷಲ್ ಪಟೇಲ್, ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಮೇಡನ್ ಓವರ್ ಮಾಡಿ ಕಮಾಲ್ ಮಾಡಿದ್ದಾರೆ.
ಡಿವೈ ಪಾಟೀಲ್ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ಹರ್ಷಲ್ ಪಟೇಲ್, ಮೊದಲ ಓವರ್ನಲ್ಲೇ ವಿಕೆಟ್ ಮೇಡನ್ ಪಡೆದರು. ಇದಾದ ನಂತರದ ಓವರ್‌ನಲ್ಲಿ ಮತ್ತೊಂದು ವಿಕೆಟ್ ಪಡೆದ ಸ್ಲೋ ಬಾಲ್ ಸ್ಪೆಷಲಿಸ್ಟ್, ಮತ್ತೊಂದು ಮೇಡನ್ ಪಡೆದು, ಸತತ ಎರಡು ಮೇಡನ್ ಓವರ್‌ಗಳನ್ನು ಮಾಡಿ ಮಿಂಚಿದರು.
ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಮೇಡನ್ ಓವರ್ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈ ಹಿಂದೆ ಆರ್‌ಸಿಬಿ ತಂಡದ ಮೊಹಮ್ಮದ್ ಸಿರಾಜ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಮೇಡನ್ ಓವರ್ ಮಾಡಿದ್ದರು. ಅಲ್ಲದೇ ಐಪಿಎಲ್‌ನಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎನಿಸಿದ್ದರು. ಈ ಇಬ್ಬರು ಬೌಲರ್‌ಗಳು ಕೆಕೆಆರ್ ವಿರುದ್ಧವೇ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಮೇಡನ್ ಓವರ್ ಮಾಡಿರುವುದು ವಿಶೇಷ.
ಹೆಚ್ಚು ಡಾಟ್ ಬಾಲ್ ಸಾಧನೆ
ಕೆಕೆಆರ್ ವಿರುದ್ಧ 4 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದ ಹರ್ಷಲ್ ಪಟೇಲ್, ಒಟ್ಟು 19 ಡಾಟ್ ಬಾಲ್‌ಗಳನ್ನು ಮಾಡಿದ್ದರು. ಆ ಮೂಲಕ ಐಪಿಎಲ್‌ನ ಇನ್ನಿಂಗ್ಸ್‌ವೊಂದರಲ್ಲಿ ಆರ್‌ಸಿಬಿ ಪರ ಹೆಚ್ಚು ಡಾಟ್ ಬಾಲ್‌ಗಳನ್ನು ಮಾಡಿದ ಬೌಲರ್‌ಗಳಲ್ಲಿ ಮೊದಲ ಸ್ಥಾನಕ್ಕೇರಿದರು. ಈ ಮೊದಲು ಡೇಲ್ ಸ್ಟೇನ್, ಜಹೀರ್ ಖಾನ್ ಹಾಗೂ ಯಜು಼ವೇಂದ್ರ ಚಹಲ್ ಅವರುಗಳು ತಮ್ಮ 4 ಓವರ್‌ಗಳಲ್ಲಿ 18 ಡಾಟ್ ಬಾಲ್‌ಗಳನ್ನು ಮಾಡಿದ್ದರು.