ಪ್ರಸಕ್ತ ಐಪಿಎಲ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಹಾರ್ದಿಕ್ ಪಾಂಡ್ಯ(67) ಭರ್ಜರಿ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ 156 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹಾರ್ದಿಕ್ ಪಾಂಡ್ಯ 67(49), ಡೇವಿಡ್ ಮಿಲ್ಲರ್ 27(20) ಅವರ ಅದ್ಭುತ ಬ್ಯಾಟಿಂಗ್ನಿಂದ ಗುಜರಾತ್ ಟೈಟನ್ಸ್, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ಗಳಿಸಿತು.
ಮತ್ತೆ ಮಿಂಚಿದ ಹಾರ್ದಿಕ್:
15ನೇ ಆವೃತ್ತಿಯ ಐಪಿಎಲ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಹಾರ್ದಿಕ್ ಪಾಂಡ್ಯ 67 ರನ್(49 ಬಾಲ್, 4 ಬೌಂಡರಿ, 2 ಸಿಕ್ಸ್) ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದರು. ತಂಡಕ್ಕೆ ಎದುರಾದ ಆರಂಭಿಕ ಆಘಾತದ ನಡುವೆಯೂ ನೆಲಕಚ್ಚಿ ಆಡಿದ ಹಾರ್ದಿಕ್ ಪಾಂಡ್ಯ, ಈ ಆವೃತ್ತಿಯ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ ಜವಾಬ್ದಾರಿಯುತ ಆಟವಾಡಿದ ಹಾರ್ದಿಕ್ ಪಾಂಡ್ಯ, 2ನೇ ವಿಕೆಟ್ಗೆ ವೃದ್ಧಿಮಾನ್ ಸಾಹ ಜೊತೆಗೂಡಿ 75 ರನ್ ಕಲೆಹಾಕಿದರು. ಅಲ್ಲದೇ ನಂತರದಲ್ಲಿ 3ನೇ ವಿಕೆಟ್ಗೆ ಡೇವಿಡ್ ಮಿಲ್ಲರ್ ಜೊತೆಯಾಗಿ 50 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ರಾಹುಲ್ ತೆವಾಟಿಯ(17) ಉಪಯುಕ್ತ ರನ್ಗಳಿಸಿದರೆ. ಆದರೆ ಕೊನೆ ಹಂತದಲ್ಲಿ ನಾಟಕೀಯ ಕುಸಿತ ಕಂಡ ಗುಜರಾತ್ ಬ್ಯಾಟ್ಸ್ಮನ್ಗಳು, ರನ್ಗಳಿಸುವ ಆತುರದಲ್ಲಿ ಮುಗ್ಗರಿಸಿದರು. ಪರಿಣಾಮ ರಶೀದ್ ಖಾನ್(0), ಅಭಿನವ್ ಮನೋಹರ್(2), ಲೂಕಿ ಫೆರ್ಗ್ಯುಸನ್(0) ತಂಡಕ್ಕೆ ಆಸರೆಯಾಗಲಿಲ್ಲ. ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(7) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ. ವೃದ್ಧಿಮಾನ್ ಸಾಹ(25) ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
ಸೌತಿ ಹಾಗೂ ರಸೆಲ್ ದಾಳಿ:
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಂಡ್ರೆ ರಸೆಲ್(4/5), ಟಿಮ್ ಸೌತಿ(3/24) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು. ಇವರಿಗೆ ಸಾಥ್ ನೀಡಿದ ಉಮೇಶ್ ಯಾದವ್(1/31), ಶಿವಂ ಮಾವಿ (1/36) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.