RCB ಹೊಸ ಕ್ಯಾಪ್ಟನ್ ಯಾರು? ವಿರಾಟ್ ಕೊಹ್ಲಿ ಸ್ಥಾನ ತುಂಬುವವರು ಯಾರು? ಮತ್ತೆ ಕೊಹ್ಲಿ RCB ಕ್ಯಾಪ್ಟನ್ ಆಗ್ತಾರಂತೆ?
ಹೀಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ, ಕುತೂಹಲ ಮೂಡಿಸಿದ್ದ ಈ ಎಲ್ಲಾ ಪ್ರಶ್ನೆಗಳಿಗೆ ಕಡೆಗೂ ಉತ್ತರ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕ್ಯಾಪ್ಟನ್ ಆಗಿ ಫಾಫ್ ಡುಪ್ಲೆಸ್ಸಿ ಅವರನ್ನ ನಿಯೋಜಿಸಲಾಗಿದೆ.
ಇದರೊಂದಿಗೆ 15ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ, ಫಾಫ್ ಡುಪ್ಲೆಸ್ಸಿ ಅವರ ಸಾರಥ್ಯದಲ್ಲಿ ಮುನ್ನಡೆಯಲಿದೆ. ಹೊಸ ನಿರೀಕ್ಷೆ, ಹೊಸ ಉತ್ಸಾಹದ ಜೊತೆಗೆ ಹೊಸ ಆತ್ಮವಿಶ್ವಾಸದಲ್ಲಿರುವ ಆರ್ಸಿಬಿ ತಂಡದ 7ನೇ ಕ್ಯಾಪ್ಟನ್ ಆಗಿ ಫಾಫ್ ಡುಪ್ಲೆಸ್ಸಿ ತಂಡದ ನಾಯಕತ್ವದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ತನ್ನದೇ ಹವಾ ಇಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಾಕಷ್ಟು ಏಳು-ಬೀಳುಗಳನ್ನ ಕಂಡಿದೆ. 2008ರಿಂದಲೂ ಐಪಿಎಲ್ ಟೂರ್ನಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಮೊದಲ ಸೀಸನ್ನಲ್ಲಿ ರಾಹುಲ್ ದ್ರಾವಿಡ್ ಅವರು ತಂಡವನ್ನ ಮುನ್ನಡೆಸಿದ್ದರು. ಆದರೆ 2ನೇ ಸೀಸನ್ನಲ್ಲಿ ನಾಯಕತ್ವದ ಬದಲಾವಣೆ ಕಂಡ ಆರ್ಸಿಬಿ ಕ್ಯಾಪ್ಟನ್ ಆಗಿ ಇಂಗ್ಲೆಂಡ್ನ ಕೇವಿನ್ ಪೀಟರ್ಸನ್ 2009ರಲ್ಲಿ ತಂಡವನ್ನ ಮುನ್ನಡೆಸಿದ್ದರು. ಇವರ ಬಳಿಕ 2010ರಲ್ಲಿ ಅನಿಲ್ ಕುಂಬ್ಳೆ, 2011-12ರಲ್ಲಿ ಡೆನಿಯಲ್ ವಿಟ್ಟೋರಿ ಅವರುಗಳು ಆರ್ಸಿಬಿ ನಾಯಕರಾಗಿದ್ದರು.
ಆನಂತರ ಆರ್ಸಿಬಿ ನಾಯಕತ್ವದ ಜವಾಬ್ದಾರಿ ವಿರಾಟ್ ಕೊಹ್ಲಿ ಅವರ ಹೆಗಲಿಗೇರಿತು. ಅಲ್ಲಿಂದ ಆರ್ಸಿಬಿಯಲ್ಲಿ ವಿರಾಟ್ ಪರ್ವ ಆರಂಭವಾಯಿತು. 2013ರಿಂದ 2021ರವರೆಗೂ ತಂಡವನ್ನ ಮುನ್ನಡೆಸಿದ್ದ ಕೊಹ್ಲಿ, ಕಳೆದ ವರ್ಷ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ 2022ರಲ್ಲಿ ಆರ್ಸಿಬಿ ತಂಡದ ಹೊಸ ನಾಯಕನಾಗಿ ಫಾಫ್ ಡುಪ್ಲೆಸ್ಸಿ ಆಯ್ಕೆಗೊಂಡಿದ್ದು, ಹೊಸ ಕ್ಯಾಪ್ಟನ್ ಮೇಲೆ ಸಾಕಷ್ಟು ಜವಾಬ್ದಾರಿ, ನಿರೀಕ್ಷೆಗಳಿವೆ.