ದಿನೇಶ್ ಕಾರ್ತಿಕ್(66*) ಸ್ಪೋಟಕ ಅರ್ಧಶತಕ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(55) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 189 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಆರ್ಸಿಬಿ, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಪರಿಣಾಮ 20 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ಗಳಿಸಿತು. ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್ವೆಲ್(55), ದಿನೇಶ್ ಕಾರ್ತಿಕ್ 66* ಹಾಗೂ ಶಹಬಾಜ್ ಅಹ್ಮದ್ 32* ಅವರುಗಳ ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ನೆರವಾದರು.
ದಿನೇಶ್-ಮ್ಯಾಕ್ಸಿ ಆರ್ಭಟ:
ಆರಂಭಿಕ ಆಘಾತಕ್ಕೆ ಸಿಲುಕಿದ್ದ ಆರ್ಸಿಬಿಗೆ ಗ್ಲೆನ್ ಮ್ಯಾಕ್ಸ್ವೆಲ್ 55 ರನ್(34 ಬಾಲ್, 7 ಬೌಂಡರಿ, 2 ಸಿಕ್ಸ್) ಅದ್ಭುತ ಆಟದಿಂದ ಚೇತರಿಕೆ ನೀಡಿದರು. ಇವರ ವಿಕೆಟ್ ಪತನದ ನಂತರ ಬಂದ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರಿಸಿದರು. ವಾಂಖೆಡೆ ಅಂಗಳದಲ್ಲಿ ಬೌಂಡರಿ, ಸಿಕ್ಸರ್ಗಳ ಮೂಲಕ ಘರ್ಜಿಸಿದರು. ಕೇವಲ 34 ಬಾಲ್ಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ಗಳನ್ನ ಸಿಡಿಸಿದ ದಿನೇಶ್ ಕಾರ್ತಿಕ್, ತಂಡದ ರನ್ಗಳಿಯ ವೇಗವನ್ನ ಹೆಚ್ಚಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಹಬಾಜ್ ಅಹ್ಮದ್ 32* ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಡೆಲ್ಲಿ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ 6ನೇ ವಿಕೆಟ್ಗೆ 97* ರನ್ ಅದ್ಭುತ ಜೊತೆಯಾಟವಾಡಿದರು.
ಇದಕ್ಕೂ ಮುನ್ನ ಆರ್ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ ಅನುಜ್ ರಾವತ್(0), ನಾಯಕ ಫಾಫ್ ಡುಪ್ಲೆಸ್ಸಿ(8), ವಿರಾಟ್ ಕೊಹ್ಲಿ(12) ಹಾಗೂ ಸುಯಾಶ್ ಪ್ರಭುದೇಸಾಯಿ(6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಥಾಕೂರ್, ಕಲೀಲ್ ಅಹ್ಮದ್, ಕುಲ್ದೀಪ್ ಯಾದವ್ ಹಾಗೂ ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.