ಕುಲ್ದೀಪ್ ಯಾದವ್(4/14) ಮಾರಕ ಬೌಲಿಂಗ್ ಹಾಗೂ ಬ್ಯಾಟ್ಸ್ಮನ್ಗಳ ಜವಾಬ್ದಾರಿ ಆಟದಿಂದ ಮತ್ತೊಮ್ಮೆ ಆಲ್ರೌಂಡ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ರೈಡರ್ಸ್ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್, ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಪರಿಣಾಮ ಕೊಲ್ಕತ್ತಾ ನೈಟ್ರೈಡರ್ಸ್, 20 ಓವರ್ಗಳಲ್ಲಿ 146/9 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಸವಾಲು ಬೆನ್ನತ್ತಿದ ಡೆಲ್ಲಿ, 19ನೇ ಓವರ್ನಲ್ಲಿ 150/6 ರನ್ಗಳಿಸಿ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 8 ಅಂಕದೊಂದಿಗೆ 6ನೇ ಸ್ಥಾನಕ್ಕೇರಿದರೆ. ಸತತ 5ನೇ ಸೋಲು ಕಂಡ ಕೊಲ್ಕತ್ತಾ, 8ನೇ ಸ್ಥಾನಕ್ಕೆ ಕುಸಿಯಿತು.
ವಾರ್ನರ್-ಪೊವಲ್ ಆಸರೆ:
ಕೊಲ್ಕತ್ತಾ ನೀಡಿದ 147 ರನ್ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಇನ್ನಿಂಗ್ಸ್ನ ಮೊದಲ ಬಾಲ್ನಲ್ಲೇ ಪೃಥ್ವಿ ಶಾ(0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಬಂದ ಮಿಚೆಲ್ ಮಾರ್ಷ್(13) ನಿರೀಕ್ಷಿತ ಆಟವಾಡಲಿಲ್ಲ. ಈ ಹಂತದಲ್ಲಿ ಜೊತೆಯಾದ ಆರಂಭಿಕ ಡೇವಿಡ್ ವಾರ್ನರ್(42) ಹಾಗೂ ಲಲಿತ್ ಯಾದವ್(22) 3ನೇ ವಿಕೆಟ್ಗೆ 65 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ನಂತರ ಬಂದ ನಾಯಕ ರಿಷಬ್ ಪಂತ್(2) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಈ ಹಂತದಲ್ಲಿ ಕಣಕ್ಕಿಳಿದ ಅಕ್ಸರ್ ಪಟೇಲ್(24) ಹಾಗೂ ರೋವ್ಮನ್ ಪೊವಲ್(33*) ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಕೊನೆವರೆಗೂ ಎಚ್ಚರಿಕೆಯ ಆಟವಾಡಿದ ಪೊವಲ್, ಕೇವಲ 16 ಬಾಲ್ಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 33* ರನ್ಗಳಿಸಿ ತಂಡವನ್ನ ಗೆಲುವಿನ ದಡಸೇರಿಸಿದರು. ಶಾರ್ದೂಲ್ ಥಾಕೂರ್(8) ರನ್ಗಳಿಸಿದರು. ಕೆಕೆಆರ್ ಪರ ಉಮೇಶ್ ಯಾದವ್(3/24) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಕೆಕೆಆರ್ ಬ್ಯಾಟಿಂಗ್ ವೈಫಲ್ಯ:
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ರೈಡರ್ಸ್, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ಆರನ್ ಫಿಂಚ್(3) ಹಾಗೂ ವೆಂಕಟೇಶ್ ಅಯ್ಯರ್(6) ಬಹುಬೇಗನೆ ನಿರ್ಗಮಿಸಿದರು. ನಂತರ ಬಂದ ಬಾಬ ಇಂದ್ರಜಿತ್(6) ಹಾಗೂ ಸುನೀಲ್ ನರೈನ್(0) ಸಹ ಬ್ಯಾಟಿಂಗ್ ವೈಫಲ್ಯ ಕಂಡರು. ಪರಿಣಾಮ ಕೆಕೆಆರ್ 35ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್(42) ಹಾಗೂ ನಿತೀಶ್ ರಾಣ(57) 5ನೇ ವಿಕೆಟ್ಗೆ 48 ರನ್ಗಳ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯ ಆಟವಾಡಿದ ನಿತೀಶ್ ರಾಣ, ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ನಂತರದಲ್ಲಿ ಆಂಡ್ರೆ ರಸೆಲ್(0) ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರೆ. ರಿಂಕು ಸಿಂಗ್(23) ಉಪಯುಕ್ತ ರನ್ ಕಲೆಹಾಕಿದರು.
ಕುಲ್ದೀಪ್ ಸ್ಪಿನ್ ಕಮಾಲ್:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಿಷಬ್ ಪಂತ್ ಲೆಕ್ಕಾಚಾರಕ್ಕೆ ತಕ್ಕಂತೆ ಡೆಲ್ಲಿ ಬೌಲರ್ಗಳು ಬೌಲಿಂಗ್ ದಾಳಿ ನಡೆಸಿದರು. ಪ್ರಮುಖವಾಗಿ ಕುಲ್ದೀಪ್ ಯಾದವ್(4/14) ಮಾರಕ ಬೌಲಿಂಗ್ ಮೂಲಕ ಕೆಕೆಆರ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಮುಸ್ತಫಿಜ಼ರ್(3/18), ಚೇತನ್ ಸಕಾರಿಯಾ(1/17) ಹಾಗೂ ಅಕ್ಸರ್ ಪಟೇಲ್(1/28) ಸಾಥ್ ನೀಡಿದರು. ಉತ್ತಮ ಬೌಲಿಂಗ್ನಿಂದ ಡೆಲ್ಲಿ ತಂಡದ ಗೆಲುವಿನ ರೂವಾರಿಯಾದ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.