IPL 2022- DC- ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡ ಮಾರ್ಶ್, ಸೆಫರ್ಟ್..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 41ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಹೋರಾಟ ನಡೆಸಲಿವೆ.
ಈ ನಡುವೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಕೋವಿಡ್ ನಿಂದ ಬಳಲುತ್ತಿದ್ದ ಆಲ್ ರೌಂಡರ್ ಮಿಟ್ಚೆಲ್ ಮಾರ್ಶ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಟಿಮ್ ಸೆಫರ್ಟ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಶಿಬಿರದಲ್ಲೂ ಭಾಗಿಯಾಗಿದ್ದರು. ಇವರಿಬ್ಬರು ತಂಡವನ್ನು ಸೇರಿಕೊಂಡಿರುವ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹೇಳಿಕೊಂಡಿದೆ.
ಮಿಟ್ಚೆಲ್ ಮಾರ್ಶ್ ಅವರು ಕೋವಿಡ್ ಸೋಂಕಿನಿಂದಾಗಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸೆಫರ್ಟ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ ಸೆಫರ್ಟ್ ಅವರು ಐಸೋಲೇಷನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಮೊದಲ ಹಂತದ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ. ನಾಲ್ಕು ಪಂದ್ಯಗಳನ್ನು ಸೋತಿದೆ. ಇದೀಗ ಮಿಟ್ಚೆಲ್ ಮಾರ್ಶ್ ಅವರ ಆಗಮನದಿಂದಾಗಿ ತಂಡಕ್ಕೆ ಇನ್ನಷ್ಟು ಬಲ ಬಂದಿದೆ. ಇನ್ನೊಂದೆಡೆ ರಿಕಿ ಪಾಂಟಿಂಗ್ ಕೂಡ ಐಸೋಲೆಷನ್ ನಿಂದ ಹೊರಬಂದಿದ್ದಾರೆ.