IPL -2022 – CSK – ಟೆಂಟ್ ಹೌಸ್ ನಲ್ಲಿ ಬೆಳೆದ ಹುಡುಗ ಈಗ ಸಿಎಸ್ ಕೆ ತಂಡದ ನೆಟ್ ಬೌಲರ್..!
ಮುಂಬೈನ ವಾಂಖೇಡೆ ಮೈದಾನದ ಪ್ರಖರವಾದ ಫ್ಲಡ್ ಲೈಟ್ ನ ಬೆಳಕು ಆತನ ಟೆಂಟ್ ಹೌಸ್ ಅನ್ನು ಆವರಿಸಿಕೊಳ್ಳುತ್ತದೆ. ಮುಗಿಲು ಮುಟ್ಟುವ ಪ್ರೇಕ್ಷಕರ ಭರಾಟೆ ಹರ್ಷೋದ್ಗಾರಗಳ ಸದ್ದು ಕಿವಿಗೆ ಅಪ್ಪಳಿಸುತ್ತವೆ. ಒಂದು ದಿನ ವಾಂಖೇಡೆ ಅಂಗಣದ ಡ್ರೆಸಿಂಗ್ ರೂಮ್ ನಲ್ಲಿ ಸ್ಟಾರ್ ಆಟಗಾರರ ಜೊತೆಯಾಗಿರುತ್ತೇನೆ ಅನ್ನೋ ಕನಸು ಕೂಡ ಕಟ್ಟಿಕೊಂಡಿರಲಿಲ್ಲ. ಟ್ರೈಡೆಂಟ್ ಹೊಟೇಲ್ ನ ಐಶಾರಾಮಿ ರೂಮ್ ನಲ್ಲಿರುತ್ತೇನೆ ಅನ್ನೋ ಊಹೆ ಕೂಡ ಮಾಡಿರಲಿಲ್ಲ. ಇದು ಏನು ಮಾಯೆಯೋ ಗೊತ್ತಿಲ್ಲ. ಆದ್ರೆ ಎರಡು ತಿಂಗಳು ಮಾತ್ರ ಬದುಕಿನ ಚಿತ್ರಣವನ್ನೇ ಬದಲಾಸಿದೆ. ಮುಂದೆ ಗೊತ್ತಿಲ್ಲ. ಈ ಐಶಾರಾಮಿತಿ ಬದುಕು ಮುಂದುವರಿಯುತ್ತೋ ಇಲ್ವವೋ.. ಆದ್ರೆ ಐಪಿಎಲ್ ಈ ಹುಡುಗನ ಬದುಕಿಗೆ ಹೊಸ ತಿರುವನ್ನು ನೀಡುವುದಂತೂ ಗ್ಯಾರಂಟಿ.
ಹೌದು. ಈತನ ಹೆಸರು ಸಲ್ಮಾನ್ ಖಾನ್. 22ರ ಹರೆಯದ ಆಫ್ ಸ್ಪಿನ್ನರ್. ಮುಂಬೈನ ಕ್ರಾಸ್ ಮೈದಾನದ ಪಕ್ಕಾದಲ್ಲಿರುವ ಟೆಂಟ್ ಹೌಸ್ ನಲ್ಲಿ ಬೆಳೆದಿರುವ ಹುಡುಗ. ಅಂದ ಹಾಗೇ ಸಲ್ಮಾನ್ ಖಾನ್ ಅವರ ತಂದೆಯ ಹೆಸರು ಇಂದ್ರೀಸ್. ಗ್ರೌಂಡ್ಸ್ ಮೆನ್. ಇಂದ್ರೀಸ್ ಅವರಿಗೆ ಸಚಿನ್ ತೆಂಡುಲ್ಕರ್ ಗೊತ್ತು. ಜಹೀರ್ ಖಾನ್ ಗೊತ್ತು. ಯಾಕಂದ್ರೆ 41 ವರ್ಷಗಳಿಂದ ಗ್ರೌಂಡ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅಂದ ಹಾಗೇ ಇಂದ್ರಿಸ್ ಅವರ ಮಗ ಸಲ್ಮಾನ್ ಖಾನ್ ಈಗ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್ ಬೌಲರ್. ಅದೊಂದು ದಿನ ಸಿಎಸ್ ಕೆ ತಂಡದ ನೆಟ್ ಬೌಲರ್ ಆಗುತ್ತೀರಾ ಅಂತ ಮೊಬೈಲ್ ಕರೆ ಬಂದಾಗ ಇಲ್ಲ ಅನ್ನಲಿಲ್ಲ. ತುಷಾರ್ ದೇಶಪಾಂಡೆಯ ಸಲಹೆಯಂತೆ ಸಲ್ಮಾನ್ ಖಾನ್ ಗೆ ಸಿಎಸ್ ಕೆ ತಂಡದ ನೆಟ್ ಬೌಲರ್ ಆಗುವ ಅವಕಾಶ ಸಿಕ್ಕಿತ್ತು.
ಈ ಅವಕಾಶವನ್ನು ಬಿಟ್ಟುಬಿಡುವ ಪ್ರಶ್ನೆಯೇ ಸಲ್ಮಾನ್ ಖಾನ್ ಎದುರಾಗಲಿಲ್ಲ. ಯಾಕಂದ್ರೆ ತನ್ನ ಕ್ರಿಕೆಟ್ ಬದುಕಿಗೆ ಹೊಸ ದಾರಿ ಸಿಕ್ಕಿದೆ ಎಂಬ ಖುಷಿ ಅವರಲ್ಲಿತ್ತು. ಈಗಾಗಲೇ ಸಿಎಸ್ ಕೆ ತಂಡದ ನೆಟ್ ಬೌಲರ್ ಗಳಾಗಿದ್ದ ಮಹೇಶ್ ಚೌಧುರಿ ಮತ್ತು ಪ್ರಶಾಂತ್ ಸೋಲಂಕಿ ಅವರು ಸಿಎಸ್ ಕೆ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು. ಹೀಗೆ ನೆಟ್ ಬೌಲರ್ ಆಗಿ ಸೇರಿಕೊಂಡ್ರೆ ಮುಂದೊಂದು ದಿನ ತನಗೂ ಆಡುವ ಅವಕಾಶ ಸಿಗುತ್ತೆ ಎಂಬ ಕಾರಣಕ್ಕಾಗಿ ಸಿಎಸ್ ಕೆ ತಂಡದ ನೆಟ್ ಬೌಲರ್ ಆಗಿ ಸೇರಿಕೊಂಡ್ರು.
ಸಹಜವಾಗಿ ಸಿಎಸ್ ಕೆ ತಂಡದ ಭಾಗವಾಗಿರುವುದರಿಂದ ಎಲ್ಲಾ ಆಟಗಾರರಿಗೂ ಒಂದೇ ರೀತಿಯ ಹೈಫೈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇಲ್ಲಿ ಯಾರಿಗೂ ತಾರತಮ್ಯ ಮಾಡುತ್ತಿಲ್ಲ. ಅಷ್ಟರ ಮಟ್ಟಿಗೆ ಸಿಎಸ್ ಕೆ ಟೀಮ್ ಮ್ಯಾನೇಜ್ ಮೆಂಟ್ ತನ್ನ ಆಟಗಾರರಿಗೆ ಸೌಲಭ್ಯಗಳನ್ನು ನೀಡುತ್ತದೆ.
ಸಲ್ಮಾನ್ ಖಾನ್ ಅವರು ಸಿಎಸ್ ಕೆ ತಂಡದ ಡ್ರೆಸಿಂಗ್ ರೂಮ್, ಧೋನಿ, ಜಡೇಜಾ ಜೊತೆಗಿನ ಫೋಟೋಗಳು, ಟ್ರೈಡೆಂಟ್ ಹೊಟೇಲ್ ನ ರೂಮ್, ಸ್ವಿಮ್ಮಿಂಗ್ ಫೂಲ್ ಹೀಗೆ ಫೋಟೋಗಳನ್ನು ತನ್ನ ಮನೆಯವರಿಗೆ ಕಳುಹಿಸುತ್ತಿದ್ದಾರೆ. ಇದನ್ನು ನೋಡಿ ಸಲ್ಮಾನ್ ಮನೆಯವರ ಸಂತಸಕ್ಕೆ ಪಾರವೇ ಇಲ್ಲ. ಯಾಕಂದ್ರೆ ಅವರಿಗೆ ಇದೆಲ್ಲಾ ಕನಸು ಅಂತನೇ ಭಾಸವಾಗುತ್ತಿದೆ.
ಪ್ರತಿ ದಿನ ಸಲ್ಮಾನ್ ತಂದೆ ಮೊಬೈಲ್ ನಲ್ಲಿ ಮಗನ ಜೊತೆ ಮಾತನಾಡುತ್ತಾರೆ. ಚೆನ್ನಾಗಿ ಅಭ್ಯಾಸ ನಡೆಸು. ಮುಂದೊಂದು ದಿನ ಒಳ್ಳೆಯದ್ದಾಗುತ್ತೆ. ನಿನ್ನ ಬೌಲಿಂಗ್ ಎಲ್ಲರ ಗಮನ ಸೆಳೆಯಬೇಕು ಎಂದು ಹೇಳುತ್ತಿರುತ್ತಾರೆ. ಯಾಕಂದ್ರೆ ಇಂದ್ರೀಸ್ ಅವರಿಗೆ ಮಗ ಸಲ್ಮಾನ್ ಒಳ್ಳೆಯ ಕ್ರಿಕೆಟಿಗನಾಗಬೇಕು ಎಂಬ ಆಸೆ ಇದೆ.
ನಾನು ಈಗಾಗಲೇ ಮಹೀ ಭಾಯ್ ಮತ್ತು ರವೀಂದ್ರ ಜಡೇಜಾ ಜೊತೆ ಮಾತನಾಡಿದ್ದೇನೆ, ನನಗೆ ಕಲಿಯುವುದು ತುಂಬಾನೇ ಇದೆ. ನನ್ನ ಬದುಕಿಗೆ ಹೊಸ ತಿರುವು ಸಿಗಬಹುದು. ಈಗಾಗಲೇ ಧೋನಿಯವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಐಪಿಎಲ್ ನಲ್ಲಿ ಆಫ್ ಸ್ಪಿನ್ನರ್ ಗಳಿಗೆ ಬ್ಯಾಟ್ಸ್ ಮೆನ್ ಗಳು ಚೆನ್ನಾಗಿ ರನ್ ದಾಖಲಿಸುತ್ತಾರೆ. ಹೀಗಾಗಿ ಯೋಚನೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಬೌಲಿಂಗ್ ಮಾಡಬೇಕು ಎಂದು ಧೋನಿ ಭಾಯ್ ಸಲಹೆ ನೀಡಿದ್ದಾರೆ ಅಂತ ಸಲ್ಮಾನ್ ಖಾನ್ ಹೇಳುತ್ತಾರೆ. IPL -2022 – CSK -tent to Trident: Salman’s journey as a CSK net bowler
ಸಲ್ಮಾನ್ ಖಾನ್ ಅವರು 23 ವಯೋಮಿತಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಸಿಎಸ್ ಕೆ ತಂಡದ ನೆಟ್ ಬೌಲರ್ ಆಗಿರುವ ಸಲ್ಮಾನ್ ಖಾನ್ ಮುಂದೊಂದು ದಿನ ಸ್ಟಾರ್ ಬೌಲರ್ ಕೂಡ ಆಗಬಹುದು. ನಸೀಬು ಹೇಗಿರುತ್ತೆ ಅಂತ ಹೇಳೋಕೆ ಆಗಲ್ಲ.
ಯುವ ಕ್ರಿಕೆಟಿಗರಿಗೆ ಪಿಚ್ ರೆಡಿ ಮಾಡಿಕೊಡುವ ಇಂದ್ರೀಸ್ ಅವರು ಎಷ್ಟೋ ಸ್ಟಾರ್ ಕ್ರಿಕೆಟಿಗರನ್ನು ನೋಡಿದ್ದಾರೆ. ಹೇಗಿದ್ದವರು ಹೇಗಾದ್ರೂ ಅನ್ನೋದನ್ನು ಕೂಡ ಕಣ್ಣಾರೆ ಕಂಡಿದ್ದಾರೆ. ಹೀಗಿರುವಾಗ ತನ್ನ ಮಗ ಕೂಡ ಸ್ಟಾರ್ ಕ್ರಿಕೆಟಿಗನಾಗಬೇಕು ಎಂದು ಆಸೆ ಪಡುತ್ತಿದ್ದಾರೆ. ಟೆಂಟ್ ಹೌಸ್ ನಿಂದ ಸ್ವಂತ ಸೂರಿನಲ್ಲಿ ವಾಸ ಮಾಡಬೇಕು. ಮಗ ಸಲ್ಮಾನ್ ಖಾನ್ ನ ಕ್ರಿಕೆಟ್ ಬದುಕು ಹಸನಾದ್ರೆ ಕಷ್ಟವೇನೂ ಆಗಲ್ಲ. ಯಾಕಂದ್ರೆ ಐಪಿಎಲ್ ನ ಮಾಯೇ ಅಂತಹುದ್ದು. ಹಲವು ಕ್ರಿಕೆಟಿಗರ ಬದುಕನ್ನು ಕಟ್ಟಿಕೊಟ್ಟ ಹೆಗ್ಗಳಿಕೆ ನಮ್ಮ ಐಪಿಎಲ್ ಗಿದೆ.