IPL 2022- CSK – MS Dhoni- ಕೊನೆಯ ಓವರ್… ಕೊನೆಯ ಎಸೆತ.. ಪಂದ್ಯ ಗೆಲ್ಲಿಸುವ ಜಾದುಗಾರ ಮಹೇಂದ್ರ ಸಿಂಗ್ ಧೋನಿ..!
ಸಿಎಸ್ ಕೆ ವಿರುದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲುವ ಅವಕಾಶವಿತ್ತು. ಆದ್ರೆ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯೂ ಇರಲಿಲ್ಲ. ಆತ್ಮವಿಶ್ವಾಸವೂ ಇರಲಿಲ್ಲ. ಕಾರಣ ಲಾಸ್ಟ್ ಓವರ್, ಲಾಸ್ಟ್ ಬಾಲ್ ನ ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ.
ಹೌದು, ಮಹೇಂದ್ರ ಸಿಂಗ್ ಧೋನಿ ಗಳಿಸಿದ್ದು ಕೇವಲ 13 ಎಸೆತಗಳಲ್ಲಿ ಅಜೇಯ 28 ರನ್. ಅದರಲ್ಲೂ 16 ರನ್ ಬಂದಿದ್ದು ಕೊನೆಯ ನಾಲ್ಕು ಎಸೆತಗಳಲ್ಲಿ. ಇನ್ನುಳಿದಿರುವ 12 ರನ್ ಗಳು ಬಂದಿದ್ದು 9 ಎಸೆತಗಳಲ್ಲಿ. ಅದರಲ್ಲೂ ಒಂದು ಬೌಂಡರಿ ಇತ್ತು.
ಹಾಗೇ ನೋಡಿದ್ರೆ ಮುಂಬೈ ಇಂಡಿಯನ್ಸ್ ಮತ್ತು ಸಿಎಸ್ ಕೆ ತಂಡಗಳ ಆರಂಭ ಚೆನ್ನಾಗಿರಲಿಲ್ಲ. ಬೌಲರ್ ಗಳು ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದ್ರೂ ಕೊನೆಯಲ್ಲಿ ದುಬಾರಿಯಾಗಿದ್ರು. ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುತ್ತೆ ಅನ್ನೋ ಅಚಲವಾದ ವಿಶ್ವಾಸವನ್ನು ಮೂಡಿಸಿತ್ತು. ಯಾಕಂದ್ರೆ 24 ಎಸೆತಗಳಲ್ಲಿ 48 ರನ್ ಗಳು ಬೇಕಿದ್ದವು.
ಆದ್ರೂ ಕ್ರೀಸ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಇರುವಷ್ಟು ಸಮಯ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಅನ್ನೋ ಅನುಮಾನ ರೋಹಿತ್ ಗೂ ಕಾಡುತ್ತಿತ್ತು. ಕೂಲ್ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಸರಿಯಾಗಿಯೇ ಪ್ಲಾನ್ ಮಾಡಿಕೊಂಡು ಬೌಲಿಂಗ್ ಮತ್ತು ಫೀಲ್ಡಿಂಗ್ ಸೆಟ್ಟಿಂಗ್ ಮಾಡುತ್ತಿದ್ದರು.
ಆದ್ರೆ ಮಾಸ್ಟರ್ ಮೈಂಡ್ ಧೋನಿಯ ಲೆಕ್ಕಚಾರನೇ ಬೇರೆನೇ ಆಗಿತ್ತು.
17ನೇ ಓವರ್ ಅನ್ನು ಜಸ್ಪ್ರಿತ್ ಬೂಮ್ರಾ ಹಾಕಿದ್ರು. ಆಗ ಸಿಎಸ್ ಕೆ ಗೆಲ್ಲಲು ಬೇಕಾಗಿದ್ದು 24 ಎಸೆತ, 48 ರನ್. ಈ ಹಂತದಲ್ಲಿ ಪ್ರಿಟೊರಿಯಸ್ ಹೊಡಿಬಡಿ ಆಟವನ್ನಾಡುವ ನಿರ್ಧಾರ ಮಾಡಿದ್ದರು. ಆದ್ರೆ ಧೋನಿ ಅವರು ಪ್ರಿಟೊರಿಯಸ್ ಅವರನ್ನು ತಡೆದ್ರು. ನಿಲ್ಲು. ಗಡಿಬಿಡಿ ಬೇಡ.. ಕಾಯೋಣ ಎಂದು ಸೂಚನೆಯನ್ನು ಧೋನಿ ಪ್ರಿಟೊರಿಯಸ್ ಗೆ ನೀಡಿದ್ರು. ಹೀಗಾಗಿ 17 ಓವರ್ ನಲ್ಲಿ ಸಿಎಸ್ ಕೆ ಗಳಿಸಿದ್ದು ಆರು ರನ್ ಮಾತ್ರ. IPL 2022- CSK – MS Dhoni Wait- MS Dhoni’s instructions for Dwaine Pretorius
18ನೇ ಓವರ್.. 18 ಎಸೆತ.. 42 ರನ್.. ಬೌಲರ್ ಜಯದೇವ್ ಉನಾದ್ಕಟ್. ಸ್ಟ್ರೈಕ್ ನಲ್ಲಿದ್ದ ಧೋನಿ ಸಿಂಗಲ್ ರನ್ ತೆಗೆದು ಪ್ರಿಟೊರಿಯಸ್ ಗೆ ಸ್ಟ್ರೈಕ್ ನೀಡಿದ್ರು. ಅಲ್ಲದೆ ಪ್ರಿಟೊರಿಯಸ್ ಗೆ ಚಾರ್ಜ್ ಮಾಡುವಂತೆ ಸಲಹೆ ನೀಡಿದ್ರು. ಪ್ರಿಟೊರಿಯಸ್ ಸಿಕ್ಸ್ ಹೊಡೆದ್ರೆ, ಧೋನಿ ಬೌಂಡರಿ ದಾಖಲಿಸಿದ್ರು. ಪರಿಣಾಮ 18ನೇ ಓವರ್ ನಲ್ಲಿ 14 ರನ್ ದಾಖಲಿಸಿತ್ತು.
19ನೇ ಓವರ್. 12 ಎಸೆತ.. 28 ರನ್.. ಮತ್ತೆ ಜಸ್ಪ್ರಿತ್ ಬೂಮ್ರಾ ಓವರ್. ಈ ಬಾರಿಯೂ ಧೋನಿ ಹೊಡಿಬಡಿ ಆಟಕ್ಕೆ ಮುಂದಾಗಲಿಲ್ಲ. ಪ್ರಿಟೊರಿಯಸ್ ಗೆ ಹೊಡೆಯುವಂತೆ ಹುರಿದುಂಬಿಸಿದ್ರು. ಪರಿಣಾಮ ಎರಡು ಬೌಂಡರಿಗಳನ್ನು ಪ್ರಿಟೊರಿಯಸ್ ಸಿಡಿಸಿದ್ರು. ಮತ್ತೆ 11 ರನ್.
20ನೇ ಓವರ್.. ಸಿಎಸ್ ಕೆ ಗೆಲ್ಲಲು ಬೇಕಾಗಿದ್ದು 17 ರನ್. ಜಯದೇವ್ ಉನಾದ್ಕಟ್ ಬೌಲಿಂಗ್. ಮೊದಲ ಎಸೆತದಲ್ಲೇ ಪ್ರಿಟೊರಿಯಸ್ ಎಲ್ ಬಿ ಬಲೆಗೆ ಬಿದ್ರು. ನಂತರ ಡ್ವೇನ್ ಬ್ರೇವೋ ಒಂದು ರನ್ ಗಳಿಸಿ ಧೋನಿಗೆ ಸ್ಟ್ರೇಕ್ ನೀಡಿದ್ರು.
ಆಗ ಮುಂಬೈ ಇಂಡಿಯನ್ಸ್ ತಂಡದ ತಳಮಳ ಹೆಚ್ಚಾಯ್ತು. ಜಯದೇವ್ ಉನಾದ್ಕಟ್ ಕೂಡ ಒತ್ತಡಕ್ಕೆ ಸಿಲುಕಿದ್ದರು. ಯಾಕಂದ್ರೆ ಕ್ರೀಸ್ ನಲ್ಲಿದ್ದದ್ದು ಮಹೇಂದ್ರ ಸಿಂಗ್ ಧೋನಿ. ಮೂರನೇ ಎಸೆತ ಸಿಕ್ಸ್, ನಾಲ್ಕನೇ ಎಸೆತ ಬೌಂಡರಿ, ಐದನೇ ಎಸೆತದಲ್ಲಿ 2 ರನ್.. ಕೊನೆಯ ಎಸೆತದಲ್ಲಿ ಬೌಂಡರಿ. ಅಲ್ಲಿಗೆ ಪಂದ್ಯ ಮುಗಿಯಿತ್ತು. ಸಿಎಸ್ ಕೆ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲಾಡಿದ್ರು. ಮುಂಬೈ ಇಂಡಿಯನ್ಸ್ ಆಟಗಾರರು ಧೋನಿಯ ಮ್ಯಾಚ್ ಫಿನಿಶಿಂಗ್ ಆಟಕ್ಕೆ ಮೂಕವಿಸ್ಮಿತರಾದ್ರು. ಇದು 41ರ ಹರೆಯದ ಮಹೇಂದ್ರ ಸಿಂಗ್ ಧೋನಿಯವರ ಮತ್ತೊಂದು ಕ್ಲಾಸ್ ಮ್ಯಾಚ್ ವಿನ್ನಿಂಗ್ ಇನಿಂಗ್ಸ್..