ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಕನಸು ಹೊತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿ ತಯಾರಿಯನ್ನು ಮಾಡಿಕೊಂಡಿದೆ. ಇದಕ್ಕಾಗಿ ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನ ತನ್ನ ತೆಕ್ಕೆಗೆ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್, ಇದೀಗ ಕೋಚಿಂಗ್ ವಿಭಾಗದಲ್ಲೂ ಮಹತ್ವದ ಬದಲಾವಣೆ ಮಾಡಿಕೊಳ್ಳುತ್ತಿದೆ.
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದು, ಕಳೆದೆರಡು ಸೀಸನ್ಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಡೆಲ್ಲಿ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು. ಆದರೆ ಈ ಹಿಂದಿನ ಸೀಸನ್ಗಳಲ್ಲಿನ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆಯಿಂದ ಹಾಗೂ ಸೂಕ್ತ ತಯಾರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದಕ್ಕಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಅಜಿತ್ ಅಗರ್ಕರ್ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ಅವರನ್ನು ಕೋಚಿಂಗ್ ಬಳಗಕ್ಕೆ ಸೇರಿಕೊಳ್ಳುತ್ತಿದೆ.
ಅಜಿತ್ ಅಗರ್ಕರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿ ಹಾಗೂ ವಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಕುರಿತಂತೆ ಸಹಿ ಒಪ್ಪಂದದ ಪ್ರಕ್ರಿಯೆಗಳಷ್ಟೇ ಬಾಕಿಯಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಈ ಹಿಂದೆ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಕೈಫ್ ಹಾಗೂ ಅಜಯ್ ಬಾತ್ರಾ ಅವರುಗಳು ಸಹಾಯಕ ಕೋಚ್ ಆಗಿದ್ದರು. ಆದರೆ ಇವರಿಬ್ಬರ ಜೊತೆಗಿನ ಒಪ್ಪಂದವನ್ನು ಡೆಲ್ಲಿ ಫ್ರಾಂಚೈಸಿ ಅಂತ್ಯಗೊಳಿಸಿದೆ ಎಂದು ಕ್ರಿಕ್ ಬಜ್ ತನ್ನ ವರದಿಯಲ್ಲಿ ತಿಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ವಿಭಾಗಕ್ಕೆ ಸೇರ್ಪಡೆಯಾಗುತ್ತಿರುವ ಅಜಿತ್ ಅಗರ್ಕರ್ ಐಪಿಎಲ್ನಲ್ಲಿ ಆಡಿರುವ ಅನುಭವ ಹೊಂದಿದ್ದು, ಈ ಹಿಂದೆ ಡೆಲ್ಲಿ ಪರ ಆಡಿದ್ದ ಅಗರ್ಕರ್, ನಂತರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿಯೂ ಆಡಿದ್ದರು. ಇನ್ನೂ ಆಸೀಸ್ ಮಾಜಿ ಆಟಗಾರ ಶೇನ್ ವಾಟ್ಸನ್, ಐಪಿಎಲ್ನ ಎರಡು ಚಾಂಪಿಯನ್ ತಂಡದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. 40 ವರ್ಷದ ವಾಟ್ಸನ್, 2008ರ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹಾಗೂ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ.