ಫಾಫ್ ಡುಪ್ಲೆಸ್ಸಿ(88) ಸ್ಪೋಟಕ ಬ್ಯಾಟಿಂಗ್ ನಡುವೆಯೂ ಕೆಚ್ಚೆದೆಯ ಆಟವಾಡಿದ ಪಂಜಾಬ್ ಕಿಂಗ್ಸ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳಿಂದ ಗೆದ್ದು ಶುಭಾರಂಭ ಮಾಡಿತು.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 2 ವಿಕೆಟ್ಗೆ 205 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ಗಳಿಸಿ, 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಪಂಜಾಬ್ ಪರ ಜವಾಬ್ದಾರಿಯುತ ಆಟವಾಡಿದ ಒಡಿಯನ್ ಸ್ಮಿತ್ 25*(8) ಹಾಗೂ ಶಾರೂಕ್ ಖಾನ್24*(20) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 5ನೇ ವಿಕೆಟ್ಗೆ ಈ ಇಬ್ಬರು ಬ್ಯಾಟ್ಸಮನ್ಗಳು ಆರ್ಸಿಬಿ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. ತಮಗೆ ದೊರೆತ ಜೀವದಾನದ ಸಂಪೂರ್ಣ ಲಾಭ ಪಡೆದ ಒಡೆಯನ್ ಸ್ಮಿತ್ ಕೇವಲ 8 ಬಾಲ್ಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಅಜೇಯ 25 ರನ್ಗಳಿಸಿ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಆರ್ಸಿಬಿ ಬೌಲರ್ಗಳು ದುಬಾರಿಯಾಗಿದ್ದು ತಂಡದ ಸೋಲಿಗೆ ಕಾರಣವಾಯಿತು.
ಪಂಜಾಬ್ ಉತ್ತಮ ಆರಂಭ
ಆರ್ಸಿಬಿ ನೀಡಿದ 206 ರನ್ಗಳ ಕಠಿಣ ಸವಾಲು ಬೆನ್ನತ್ತಿದ ಪಂಜಾಬ್ ಕಿಂಗ್ಸ್, ಉತ್ತಮ ಆರಂಭ ಕಂಡಿತು. ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಮಯಂಕ್ ಅಗರ್ವಾಲ್ 32(24) ಹಾಗೂ ಶಿಖರ್ ಧವನ್ 43(29) ಮೊದಲ ವಿಕೆಟ್ಗೆ 71 ರನ್ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ಬನುಕಾ ರಾಜಪಕ್ಸ 43(22) ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್ನಿಂದ ಗಮನ ಸೆಳೆದರು. ಆದರೆ ನಂತರ ಬಂದ ಲಿಯಮ್ ಲಿವಿಂಗ್ಸ್ಟೋನ್(19) ಹಾಗೂ ಚೊಚ್ಚಲ ಪಂದ್ಯವಾಡಿದ ರಾಜ್ ಬವಾ(0) ಮೊದಲ ಬಾಲ್ನಲ್ಲೇ ಔಟಾಗಿ ನಿರಾಸೆ ಅನುಭವಿಸಿದರು. ಆರ್ಸಿಬಿ ಪರ 2, ಅಕ್ಷದೀಪ್ ಹಾಗೂ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಆರ್ಸಿಬಿ ಬೃಹತ್ ಮೊತ್ತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡುಪ್ಲೆಸ್ಸಿ(88) ಹಾಗೂ ಅನುಜ್ ರಾವತ್(21) ಮೊದಲ ವಿಕೆಟ್ಗೆ 50 ರನ್ ಕಲೆಹಾಕಿದರು. 2ನೇ ವಿಕೆಟ್ಗೆ ಜೊತೆಯಾದ ಫಾಫ್ ಡುಪ್ಲೆಸ್ಸಿ ಹಾಗೂ ವಿರಾಟ್ ಕೊಹ್ಲಿ, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಂಜಾಬ್ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಈ ಜೋಡಿ, 118 ರನ್ಗಳ ಅಮೋಘ ಜೊತೆಯಾಟವಾಡಿದರು. ಸ್ಪೋಟಕ ಆಟವಾಡಿದ ಡುಪ್ಲೆಸ್ಸಿ, 57 ಬಾಲ್ಗಳಲ್ಲಿ 88 (3 ಬೌಂಡರಿ, 7 ಸಿಕ್ಸರ್) ರನ್ಗಳಿಸಿ ಮಿಂಚಿದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ(41*) ಹಾಗೂ ಇನ್ನಿಂಗ್ಸ್ ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್(32*) ಬಿರುಸಿನ ಆಟವಾಡಿದರು. ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ದುಬಾರಿಯಾದ ಇತರೆ ರನ್ಗಳು:
ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಇತರೆ ರೂಪದಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟವು. ಮೊದಲು ಬೌಲಿಂಗ್ ಮಾಡಿದ ಪಂಜಾಬ್ 12 ವೈಡ್, 6 ಲೆಗ್ ಬೈ ಹಾಗೂ 5 ಬೈ ಮೂಲಕ ಒಟ್ಟು 23 ರನ್ ಬಿಟ್ಟುಕೊಟ್ಟಿತು. ನಂತರ 2ನೇ ಸರದಿಯಲ್ಲಿ ಬೌಲಿಂಗ್ ಮಾಡಿದ ಆರ್ಸಿಬಿ, 1 ಲೆಗ್ ಬೈ ಹಾಗೂ 21 ವೈಡ್ ಮೂಲಕ 22 ರನ್ ನೀಡಿದ್ದು, ಆರ್ಸಿಬಿಗೆ ಮುಳುವಾಯಿತು.